ಮುಂಬೈ: ಬಾಲಿವುಡ್‌ನ ಖ್ಯಾತ ನಟ ಸೈಫ್ ಅಲಿ ಖಾನ್‌ಗೆ ಚಾಕು ಇರಿದ ಆರೋಪದ ಮೇಲೆ ಬಂಧಿತನಾಗಿರುವ ಆರೋಪಿ ಬಾಂಗ್ಲಾದೇಶದ ವ್ಯಕ್ತಿಯ ಮುಖವು ನಟನ ನಿವಾಸವಿರುವ ಕಟ್ಟಡದ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿರುವ ವ್ಯಕ್ತಿಯ ಮುಖದೊಂದಿಗೆ ಹೋಲಿಕೆಯಾಗಿದೆ ಎಂದು ಫೇಸ್ ರೆಕಗ್ನಿಷನ್ ಪರೀಕ್ಷೆಯಲ್ಲಿ ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪರೀಕ್ಷಾ ವರದಿ ಪ್ರಕಾರ, ಸೈಫ್ ಮೇಲಿನ ದಾಳಿಗೆ ಸಂಬಂಧಿಸಿದಂತೆ ಬಂಧಿತನಾಗಿರುವ ಶರೀಫುಲ್ ಇಸ್ಲಾಂ ಶೆಹಜಾದ್ ಮೊಹಮ್ಮದ್ ರೋಹಿಲ್ಲಾ ಅಮೀನ್ ಫಕೀರ್‌ನ (30) ಮುಖ ಮತ್ತು ಬಾಂದ್ರಾದ ಸದ್ಗುರು ಶರಣ್ ಕಟ್ಟಡದ ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿರುವ ಮುಖ ಒಂದೇ ವ್ಯಕ್ತಿಯದ್ದು ಎಂದು ದೃಢಪಟ್ಟಿರುವುದಾಗಿ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
ಫೇಶಿಯಲ್ ರೆಕಗ್ನಿಷನ್ ತಂತ್ರಜ್ಞಾನವು ಈ ಪ್ರಕರಣವನ್ನು ಭೇದಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಅವರು ಹೇಳಿದರು.
ಪೊಲೀಸರ ಪ್ರಕಾರ, ಜನವರಿ 16ರ ಮುಂಜಾನೆ ಬಾಲಿವುಡ್ ನಟನ 12ನೇ ಮಹಡಿಯ ಅಪಾರ್ಟ್‌ಮೆಂಟ್‌ಗೆ ನುಗ್ಗಿದ ಶರೀಫುಲ್, ಸೈಫ್ ಅವರಿಗೆ ಆರು ಬಾರಿ ಇರಿದಿದ್ದಾನೆ. ನಂತರ ಸ್ಥಳದಿಂದ ಪರಾರಿಯಾಗಿದ್ದಾನೆ.
ಘಟನೆ ನಡೆದ ಮೂರು ದಿನಗಳ ನಂತರ ಆರೋಪಿಯನ್ನು ನೆರೆಯ ಥಾಣೆಯಲ್ಲಿ ಬಂಧಿಸಲಾಯಿತು. ಮುಂಬೈ ನ್ಯಾಯಾಲಯ ಬುಧವಾರ ಆರೋಪಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಚಾಕು ದಾಳಿಯ ನಂತರ, ಖಾನ್ ಅವರನ್ನು ಹತ್ತಿರದ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಎರಡು ಶಸ್ತ್ರಚಿಕಿತ್ಸೆಯ ಬಳಿಕ ಜನವರಿ 21ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು.