ಇಂದೋರ್: ಜಗಳದಿಂದಾಗಿ ಪತ್ನಿಯು ತವರು ಮನೆಗೆ ತೆರಳಿದ್ದ ಕೆಲವು ದಿನಗಳ ನಂತರ ಶುಕ್ರವಾರ ಇಂದೋರ್‌ನ 32 ವರ್ಷದ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದ್ವಾರಕಾಪುರಿ ಪೊಲೀಸ್ ಠಾಣೆ ವ್ಯಾಪ್ತಿಯ ಪೊಲೀಸ್ ಚೌಕದಲ್ಲಿ ನಿಯೋಜಿತರಾಗಿದ್ದ ಕಾನ್‌ಸ್ಟೆಬಲ್ ಅನುರಾಗ್, ತಮ್ಮ ಸೇವಾ ರೈಫಲ್‌ನಿಂದ ಗುಂಡು ಹಾರಿಸಿಕೊಂಡಿದ್ದು, ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ ಎಂದು ಅವರು ಹೇಳಿದರು.
ಪ್ರಾಥಮಿಕ ತನಿಖೆಯ ಪ್ರಕಾರ, 'ಕೆಲವು ದಿನಗಳ ಹಿಂದೆ ಕಾನ್‌ಸ್ಟೆಬಲ್ ಮತ್ತು ಅವರ ಪತ್ನಿ ನಡುವೆ ಕೌಟುಂಬಿಕ ಕಲಹ ಉಂಟಾಗಿತ್ತು. ನಂತರ ಪತ್ನಿ ತಮ್ಮ ತಾಯಿಯ ಮನೆಗೆ ಹೋಗಿದ್ದರು. ಇದರಿಂದ ಪೊಲೀಸ್ ಕಾನ್‌ಸ್ಟೆಬಲ್ ಒತ್ತಡಕ್ಕೊಳಗಾಗಿದ್ದರು' ಎಂದು ಹೆಚ್ಚುವರಿ ಉಪ ಪೊಲೀಸ್ ಆಯುಕ್ತ ಆನಂದ್ ಯಾದವ್ ಹೇಳಿದರು.
ಕಾನ್‌ಸ್ಟೆಬಲ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಅವರ ಸಾವಿನ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.