ರಾಮಗಢ: ಜಾರ್ಖಂಡ್‌ನ ರಾಮಗಢ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದ ಸಮಯದಲ್ಲಿ ಕಲ್ಲಿದ್ದಲು ಗಣಿಯ ಒಂದು ಭಾಗ ಕುಸಿದು ನಾಲ್ವರು ಸಾವನ್ನಪ್ಪಿದ್ದಾರೆ ಮತ್ತು ಇನ್ನೂ ಕೆಲವರು ಒಳಗಡೆ ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಜಿಲ್ಲೆಯ ಕುಜು ಹೊರಠಾಣೆಯ ಕರ್ಮ ಪ್ರದೇಶದಲ್ಲಿ ಇಂದು ಬೆಳಗಿನ ಜಾವ ಈ ಘಟನೆ ಸಂಭವಿಸಿದೆ.
"ದುರಂತ ಸ್ಥಳದಿಂದ ನಾಲ್ಕು ಶವಗಳನ್ನು ವಶಪಡಿಸಿಕೊಳ್ಳಲಾಗಿದೆ" ಎಂದು SDPO(ರಾಮಗಢ) ಪರಮೇಶ್ವರ ಪ್ರಸಾದ್ ಅವರು ಹೇಳಿದ್ದಾರೆ.
ಆದಾಗ್ಯೂ, ಪೊಲೀಸ್ ತಂಡ ಸ್ಥಳಕ್ಕೆ ಬರುವ ಮೊದಲೇ ಗ್ರಾಮಸ್ಥರು ಮೂರು ಶವಗಳನ್ನು ತೆಗೆದುಕೊಂಡು ಹೋದರು ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.
ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಬೆಳಗ್ಗೆಯಿಂದ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ.
ಸೆಂಟ್ರಲ್ ಕೋಲ್‌ಫೀಲ್ಡ್ಸ್ ಲಿಮಿಟೆಡ್‌ನ ಸ್ಥಗಿತಗೊಳಿಸಲಾಗಿದ್ದ ಗಣಿಯಲ್ಲಿ ಘಟನೆ ನಡೆದಿದೆ ಎಂದು ಎಸ್‌ಪಿ ಅಜಯ್ ಕುಮಾರ್ ಹೇಳಿದ್ದಾರೆ.
"ಇಂತಹ ಅಕ್ರಮ ಚಟುವಟಿಕೆಗಳನ್ನು ತಡೆಯಲು ಕಂಪನಿಯು ತನ್ನದೇ ಆದ ಭದ್ರತಾ ಸಿಬ್ಬಂದಿಯನ್ನು ಹೊಂದಿದೆ. ನಮಗೆ ಮಾಹಿತಿ ಬಂದ ನಂತರ ನಾವು CCLಗೆ ನಮ್ಮ ಸಹಕಾರವನ್ನು ವಿಸ್ತರಿಸಿದ್ದೇವೆ" ಎಂದು ಅವರು ತಿಳಿಸಿದ್ದಾರೆ.