ಲುದಿಯಾನ: ಲುದಿಯಾನದ ಹಳ್ಳಿಯೊಂದರಲ್ಲಿ ದಲಿತ ಯುವಕನ ಮೇಲೆ ಹಲ್ಲೆ ನಡೆಸಿ, ಬಲವಂತವಾಗಿ ಕಪ್ಪು ಬಣ್ಣ ಬಳಿದು ಅರೆನಗ್ನವಾಗಿ ಮೆರವಣಿಗೆ ಮಾಡಲಾಗಿರುವ ಘಟನೆ ವರದಿಯಾಗಿದೆ.
ಮಂಗಳವಾರ ಲುಧಿಯಾನದ ಹೊರವಲಯದಲ್ಲಿರುವ ಸೀದಾ ಗ್ರಾಮದಲ್ಲಿ ನಡೆದ ಘಟನೆಯ ವೈರಲ್ ವಿಡಿಯೋ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಘಟನೆಗೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಭಾಗಿಯಾಗಿರುವ ಇತರರನ್ನು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ದಂಪತಿಗಳು ಓಡಿಹೋಗಲು ಹರ್ಜೋತ್ ಸಿಂಗ್ ಸಹಾಯ ಮಾಡಿದ್ದಾರೆಂದು ಶಂಕಿಸಿದ ನಂತರ ಮಹಿಳೆಯ ಕುಟುಂಬದವರು ಆತನ ಮೇಲೆ ದಾಳಿ ನಡೆಸಿದ್ದಾರೆ.
ಹರ್ಜೋತ್ ಅವರ ಸ್ನೇಹಿತ ಮತ್ತು ಮಹಿಳೆ ಜೂನ್ 19 ರಂದು ವಿವಾಹವಾಗಿದ್ದರು. ಇದರ ನಂತರ ಗ್ರಾಮದಲ್ಲಿ ಉದ್ವಿಗ್ನತೆ ಮುಂದುವರೆಯಿತು. ಮಂಗಳವಾರ, ಹರ್ಜೋತ್ ಸಲೂನ್‌ನಲ್ಲಿದ್ದಾಗ ಕೆಲವು ಪುರುಷರು ಒಳಗೆ ನುಗ್ಗಿ, ಅವರನ್ನು ಹೊರಗೆಳೆದು ಕ್ರೂರವಾಗಿ ಹಲ್ಲೆ ನಡೆಸಿದರು.
ಅವರು ಬಲವಂತವಾಗಿ ಅವನ ಗಡ್ಡ ಮತ್ತು ಮೀಸೆಯನ್ನು ಬೋಳಿಸಿದರು, ಮುಖಕ್ಕೆ ಕಪ್ಪು ಬಣ್ಣ ಬಳಿದು, ಬಟ್ಟೆಗಳನ್ನು ಹರಿದು, ಬೀದಿಗಳಲ್ಲಿ ಅರೆಬೆತ್ತಲೆಯಾಗಿ ಮೆರವಣಿಗೆ ಮಾಡಿ ಜಾತಿ ನಿಂದನೆ ಮಾಡಿದ್ದಾರೆ. ಆ ವ್ಯಕ್ತಿಗಳು ಈ ಕೃತ್ಯವನ್ನು ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡಿದರು ಎಂದು ಪೊಲೀಸರು ತಿಳಿಸಿದ್ದಾರೆ.
ದಾಳಿಕೋರರನ್ನು ಗುರುಪ್ರೀತ್ ಅಲಿಯಾಸ್ ಗೋಪಾ, ಸಿಮ್ರನ್‌ಜೀತ್ ಸಿಂಗ್ ಅಲಿಯಾಸ್ ಸಿಮ್ಮಾ, ಸಂದೀಪ್ ಅಲಿಯಾಸ್ ಸ್ಯಾಮ್, ರಾಜ್‌ವೀರ್ ಮತ್ತು ರಮಣದೀಪ್ ಅಲಿಯಾಸ್ ಕಾಕಾ ಎಂದು ಗುರುತಿಸಲಾಗಿದೆ.