ನವದೆಹಲಿ: ಆಡಳಿತಾತ್ಮಕ ಕಾರಣಗಳಿಂದಾಗಿ ದೆಹಲಿ ಸರ್ಕಾರ, ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಅಧಿಕೃತ ನಿವಾಸದ ನವೀಕರಣಕ್ಕಾಗಿ ಕರೆಯಲಾಗಿದ್ದ ಟೆಂಡರ್ ಅನ್ನು ರದ್ದುಗೊಳಿಸಿದೆ ಎಂದು ಬುಧವಾರ ಮೂಲಗಳು ತಿಳಿಸಿವೆ.
ಸಿಎಂ ರೇಖಾ ಗುಪ್ತಾ ಅವರಿಗೆ ಲೋಕೋಪಯೋಗಿ ಇಲಾಖೆಯಿಂದ ರಾಜ್ ನಿವಾಸ್ ಮಾರ್ಗದಲ್ಲಿ ಎರಡು ಬಂಗಲೆಗಳನ್ನು ಮಂಜೂರು ಮಾಡಲಾಗಿತ್ತು. ಒಂದು ಅವರ ವಾಸಕ್ಕೆ ಮತ್ತು ಇನ್ನೊಂದು ಗೃಹ ಕಚೇರಿಗಾಗಿ ನೀಡಲಾಗಿತ್ತು.
ರೇಖಾ ಗುಪ್ತಾ ಅವರು ಕಳೆದ ವಾರ ತಮ್ಮ ಗೃಹ ಕಚೇರಿಯನ್ನು ಉದ್ಘಾಟಿಸಿದ್ದರು ಮತ್ತು ಇದರ ನವೀಕರಣಕ್ಕಾಗಿ 60 ಲಕ್ಷ ರೂ. ಮೌಲ್ಯದ ಟೆಂಡರ್ ಕರೆಯಲಾಗಿತ್ತು. ಈ ನವೀಕರಣದಲ್ಲಿ 14 ಎಸಿಗಳು, ವಿದ್ಯುತ್ ಉಪಕರಣಗಳ ಬದಲಾವಣೆ, ಟಿವಿ ಮತ್ತು ಸಿಸಿಟಿವಿಗಳು ಸೇರಿದಂತೆ ಹಲವು ಸೌಕರ್ಯಗಳನ್ನು ಪ್ರಸ್ತಾಪಿಸಲಾಗಿತ್ತು.
ಇದಲ್ಲದೆ ಮನೆಯಲ್ಲಿ 2 ಲಕ್ಷ ರೂ.ಗಳ ನಿರಂತರ ವಿದ್ಯುತ್ ಸರಬರಾಜು(ಯುಪಿಎಸ್) ವ್ಯವಸ್ಥೆಯೂ ಇರುತ್ತದೆ. ಹೆಚ್ಚುವರಿಯಾಗಿ, 1.8 ಲಕ್ಷ ರೂ.ಗೆ ರಿಮೋಟ್ ಕಂಟ್ರೋಲ್ ಹೊಂದಿರುವ 23 ಸೀಲಿಂಗ್ ಫ್ಯಾನ್‌ಗಳು, 85,000 ರೂ.ಗೆ ಒಂದು ಒಟಿಜಿ (ಓವನ್ ಟೋಸ್ಟ್ ಗ್ರಿಲ್), 77,000 ರೂ.ಗೆ ಹಾಗೂ 60,000 ರೂ.ಗೆ ಒಂದು ಸ್ವಯಂಚಾಲಿತ ವಾಷಿಂಗ್ ಮೆಷಿನ್ ಮತ್ತು ಒಂದು ಡಿಶ್‌ವಾಶರ್, 63,000 ರೂ. ಗ್ಯಾಸ್ ಸ್ಟೌವ್, 32,000 ರೂ. ಮೌಲ್ಯದ ಮೈಕ್ರೋವೇವ್‌ಗಳು ಮತ್ತು 91,000 ರೂ.ಗೆ ಆರು ಗೀಸರ್‌ಗಳನ್ನು ಅಳವಡಿಸಲಾಗುವುದು ಎಂದು ತಿಳಿದು ಬಂದಿತ್ತು. ಆದರೆ ಇದೀಗ ಈ ಟೆಂಡರ್ ರದ್ದು ಮಾಡಲಾಗಿದೆ.