ಪದ್ರಾ (ಗುಜರಾತ್): ಗುಜರಾತ್‌ನ ವಡೋದರಾ ಜಿಲ್ಲೆಯಲ್ಲಿ 43 ವರ್ಷದ ಹಳೆಯ ಸೇತುವೆ ಕುಸಿದು ಬಿದ್ದಿದ್ದ ಪ್ರಕರಣದಲ್ಲಿ ಮತ್ತೆ ಮೂವರ ಮೃತದೇಹಗಳು ಪತ್ತೆಯಾಗಿದ್ದು, ಇದರೊಂದಿಗೆ ಮೃತಪಟ್ಟವರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.
ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಇನ್ನೂ ನಾಲ್ವರು ನಾಪತ್ತೆಯಾಗಿದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ ವಡೋದರಾ ಕಲೆಕ್ಟರ್ ಅನಿಲ್ ಧಮೇಲಿಯಾ ಅವರು, ಇಂದು 3 ಶವಗಳು ಪತ್ತೆಯಾಗಿದ್ದು, ಸಾವಿನ ಸಂಖ್ಯೆ 15 ಕ್ಕೆ ತಲುಪಿದೆ. ನಾಲ್ವರು ನಾಪತ್ತೆಯಾಗಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ 4 ಕಿ.ಮೀ. ಕೆಳಭಾಗದವರೆಗೆ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ. ಘಟನಾ ಸ್ಥಳದಲ್ಲಿ ಎರಡು ವಾಹನಗಳು ಕೆಸರಿನಲ್ಲಿ ಸಿಲುಕಿಕೊಂಡಿವೆ. ಆ ವಾಹನಗಳ ಕುರಿತು ಸಾರ್ವಜನಿಕರಿಂದ ಮಾಹಿತಿ ಪಡೆಯಲಾಗುತ್ತಿದೆ. ಮಳೆಯಾಗುತ್ತಿದ್ದು, ನದಿಯ ನೀರಿನ ಮಟ್ಟ ಹೆಚ್ಚಾಗಿದೆ ಎಂದು ಹೇಳಿದ್ದಾರೆ.
ಸೇತುವೆಯಲ್ಲಿ ತೂಗಾಡುತ್ತಿರುವ ಟ್ರಕ್ ಕುರಿತು ಮಾತನಾಡಿ, ಅದು ಖಾಲಿ ಟ್ಯಾಂಕರ್ ಆಗಿದ್ದು, ಸರಿಸಿದರೆ ಮತ್ತಷ್ಟು ಸೇತುವೆ ಮಾರ್ಗ ಬೀಳಲಿದೆ. ಸೇತುವೆ ಕೆಳಗಡೆ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಹೀಗಾಗಿ ಟ್ಯಾಂಕರ್'ನ್ನು ಸ್ಥಿರಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಿದರು.
ವಡೋದರಾ ಪೊಲೀಸ್ ವರಿಷ್ಠಾಧಿಕಾರಿ (SP) ರೋಹನ್ ಆನಂದ್ ಅವರು ಮಾತನಾಡಿ, ಎರಡು ಟ್ರಕ್‌ಗಳು, ಎರಡು ಪಿಕಪ್ ವ್ಯಾನ್‌ಗಳು ಮತ್ತು ಒಂದು ರಿಕ್ಷಾ ನದಿಗೆ ಬಿದ್ದಿದ್ದು, ಎರಡು ವಾಹನಗಳು ಸೇತುವೆಯಲ್ಲಿ ಸಿಲುಕಿಕೊಂಡಿವೆ. ಈವರೆಗೂ 9 ಜನರನ್ನು ರಕ್ಷಣೆ ಮಾಡಲಾಗಿದ್ದು, ಐವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ರಕ್ಷಣೆಗೊಳಗಾದ 9 ಮಂದಿಯ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಿದ್ದಾರೆ.
ಈ ನಡುವೆ ಮೃತರ ಕುಟುಂಬಕ್ಕೆ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ (PMNRF) 2 ಲಕ್ಷ ರೂಪಾಯಿ ಹಾಗೂ ಗಾಯಾಳುಗಳಿಗೆ ರೂ.50,000 ರೂ. ಪರಿಹಾರ ನೀಡುವುದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಘೋಷಣೆ ಮಾಡಿದ್ದಾರೆ.
ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಕೂಡ ಮೃತರ ಕುಟುಂಬಗಳಿಗೆ 4 ಲಕ್ಷ ರೂಪಾಯಿ ಮತ್ತು ಗಾಯಾಳುಗಳಿಗೆ 50,000 ರೂಪಾಯಿ ಪರಿಹಾರವನ್ನು ಘೋಷಿಸಿದ್ದಾರೆ.