ಅಹಮದಾಬಾದ್: ಗುಜರಾತ್‌ನ ವಡೋದರಾ ಜಿಲ್ಲೆಯಲ್ಲಿ ಬುಧವಾರ ಸಂಭವಿಸಿದ ಗಂಭೀರಾ ಸೇತುವೆ ಕುಸಿತ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಶುಕ್ರವಾರ 20ಕ್ಕೆ ಏರಿಕೆಯಾಗಿದೆ.
ಮಹಿಸಾಗರ್ ನದಿಗೆ ಕಟ್ಟಲಾದ 40 ವರ್ಷ ಹಳೆಯ ಸೇತುವೆ ಕುಸಿದು, ಸಂಚರಿಸುತ್ತಿದ್ದ ಹಲವು ವಾಹನಗಳು ನದಿಗೆ ಬಿದ್ದಿದ್ದವು. ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಇಂದು 20ಕ್ಕೆ ಏರಿಕೆಯಾಗಿದ್ದು, ನದಿಗೆ ಬಿದ್ದವರಲ್ಲಿ ಇನ್ನೂ ಇಬ್ಬರು ನಾಪತ್ತೆಯಾಗಿದ್ದು, ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ಮುಂದುವರೆದಿದೆ.
ಒಂದು ಕಡೆ ಮೃತರ ಕುಟುಂಬಗಳ ದುಃಖ ಹೆಚ್ಚುತ್ತಿದ್ದು, ಮತ್ತೊಂದು ಕಡೆ ರಾಜಕೀಯ ನಾಯಕರ ಕಟುವಾದ ಆರೋಪ, ಪ್ರತ್ಯಾರೋಪಗಳಿಂದ ಮೃತರ ಅಂತ್ಯಕ್ರಿಯೆ ವಿಳಂಬವಾಗುತ್ತಿದೆ.
ದುರಂತದಿಂದ ತೀವ್ರ ಟೀಕೆ ಎದುರಿಸುತ್ತಿರುವ ಗುಜರಾತ್ ಸರ್ಕಾರ, ಪ್ರಾಥಮಿಕ ತನಿಖೆಯ ನಂತರ ಲೋಕೋಪಯೋಗಿ ಇಲಾಖೆಯ (ಪಿಡಬ್ಲ್ಯೂಡಿ) ನಾಲ್ವರು ಎಂಜಿನಿಯರ್‌ಗಳನ್ನು ಅಮಾನತುಗೊಳಿಸಿದೆ.
ಲೋಕೋಪಯೋಗಿ ಖಾತೆ ಹೊಂದಿರುವ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದು, 30 ದಿನಗಳಲ್ಲಿ ವಿವರವಾದ ವರದಿ ನೀಡುವಂತೆ ಸೂಚಿಸಿದ್ದಾರೆ.