ಮುಂಬೈ: ಹಳಸಿದ ಆಹಾರ ನೀಡಿದ್ದಾರೆ ಎಂದು ಕ್ಯಾಂಟೀನ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಬುಲ್ದಾನಾ ವಿಧಾನಸಭಾ ಕ್ಷೇತ್ರದ ಶಿವಸೇನಾ ಶಾಸಕ ಸಂಜಯ್ ಗಾಯಕ್ವಾಡ್ ಅವರ ವಿರದ್ಧ ಮುಂಬೈ ಪೊಲೀಸರು ಪ್ರಕರಣ ದಾಖಲಿಸಲು ನಿರ್ಧರಿಸಿದ್ದಾರೆ.
ಸಂಜಯ್ ಗಾಯಕ್ವಾಡ್ ಅವರು ಶಾಸಕರ ಹಾಸ್ಟೆಲ್‌ನ ಕ್ಯಾಂಟೀನ್ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿ, ಹಲ್ಲೆ ನಡೆಸಿದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ನಂತರ ಪೊಲೀಸರು ಮೆರೈನ್ ಡ್ರೈವ್ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಲು ನಿರ್ಧರಿಸಿದ್ದು, ಎಫ್ಐಆರ್ ದಾಖಲಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಎಎನ್‌ಐ ವರದಿ ಮಾಡಿದೆ.
ಸಂಜಯ್ ಗಾಯಕ್ವಾಡ್ ಅವರು ಕಳೆದ ಮಂಗಳವಾರ ಸಂಜೆ "ಹಳಸಿದ" ದಾಲ್ ಮತ್ತು ಅನ್ನ ನೀಡಿದ್ದಾರೆಂದು ಆರೋಪಿಸಿ, ಕೊಲಾಬಾದ ಶಾಸಕರ ಹಾಸ್ಟೆಲ್‌ನ ಕ್ಯಾಂಟೀನ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದರು.
ಗಾಯಕ್ವಾಡ್ ಕ್ಯಾಂಟೀನ್ ಗುತ್ತಿಗೆದಾರ ಸೇರಿದಂತೆ ಸಿಬ್ಬಂದಿಗೆ ಹೊಡೆಯುತ್ತಿರುವ ವಿಡಿಯೋ ಬುಧವಾರ ವೈರಲ್ ಆಗಿದ್ದು, ವಿರೋಧ ಪಕ್ಷಗಳಿಂದ ತೀವ್ರ ಖಂಡನೆ ವ್ಯಕ್ತವಾಗಿದೆ.
ಈ ಘಟನೆಯನ್ನು ಸರ್ಕಾರ ಮತ್ತು ವಿರೋಧ ಪಕ್ಷದ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ. ಇಂತಹ ನಡವಳಿಕೆಯು ಚುನಾಯಿತ ಪ್ರತಿನಿಧಿಗಳು ತಮ್ಮ ಅಧಿಕಾರ ದುರುಪಯೋಗಪಡಿಸಿಕೊಳ್ಳುವ ಬಗ್ಗೆ "ತಪ್ಪು ಸಂದೇಶ"ವನ್ನು ರವಾನಿಸುತ್ತದೆ ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ. ಅಲ್ಲದೆ ಅಧಿಕೃತ ದೂರಿಗಾಗಿ ಕಾಯದೆ ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ.
ಇನ್ನು ಉಪಮುಖ್ಯಮಂತ್ರಿ ಮತ್ತು ಶಿವಸೇನಾ ನಾಯಕ ಏಕನಾಥ್ ಶಿಂಧೆ ಅವರು ಸಹ ತಮ್ಮ ಪಕ್ಷದ ಶಾಸಕ ಗಾಯಕ್ವಾಡ್ ಅವರ ನಡವಳಿಕೆಗೆ ಛೀಮಾರಿ ಹಾಕಿದ್ದಾರೆ. ಅವರು ಮಾಡಿದ್ದು ತಪ್ಪು. ಆಹಾರದ ಬಗ್ಗೆ ಅವರು ಅಸಮಾಧಾನಗೊಂಡಿದ್ದರೂ ಸಹ ಅವರ ನಡೆ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ" ಎಂದು ಶಿಂಧೆ ಹೇಳಿದ್ದಾರೆ.
ಏತನ್ಮಧ್ಯೆ, ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ(ಎಫ್‌ಡಿಎ) ಕ್ಯಾಂಟೀನ್ ಗುತ್ತಿಗೆದಾರರ ಪರವಾನಗಿಯನ್ನು ಅಮಾನತುಗೊಳಿಸಿದ್ದು, ತಪಾಸಣೆಯಲ್ಲಿ ಆಹಾರ ಸುರಕ್ಷತಾ ಮಾನದಂಡಗಳ ಉಲ್ಲಂಘನೆ ಕಂಡುಬಂದಿದೆ.
ಇನ್ನು ತಮ್ಮ ಕೃತ್ಯದ ಬಗ್ಗೆ ವಿಷಾದ ವ್ಯಕ್ತಪಡಿಸಿದ ಗಾಯಕ್ವಾಡ್, "ನಾನು ಆರು ವರ್ಷಗಳಿಂದ ಶಾಸಕರ ಹಾಸ್ಟೆಲ್‌ನಲ್ಲಿ ವಾಸಿಸುತ್ತಿದ್ದೇನೆ. ಈ ಹಿಂದೆಯೂ ಆಹಾರದಲ್ಲಿ ಹಲ್ಲಿಗಳು ಮತ್ತು ಇಲಿಗಳು ಕಂಡುಬಂದಿವೆ" ಎಂದು ಆರೋಪಿಸಿದರು.