ನವದೆಹಲಿ: ಕಡಿಮೆ ಗುಣಮಟ್ಟದ ರಸಗೊಬ್ಬರಗಳ ವಿರುದ್ಧ ತಕ್ಷಣ ಕಠಿಣ ಕ್ರಮ ಕೈಗೊಳ್ಳುವಂತೆ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿದ್ದಾರೆ.
ಈ ಸಂಬಂಧ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಡಾಳಿತ ಪ್ರದೇಶಗಳಿಗೆ ಪತ್ರ ಬರೆದಿರುವ ಕೇಂದ್ರ ಸಚಿವರು, ಕೃಷಿಯು ಭಾರತದ ಆರ್ಥಿಕತೆಯ ಬೆನ್ನೆಲುಬು ಆಗಿದ್ದು, ರೈತರ ಆದಾಯದಲ್ಲಿ ಸ್ಥಿರತೆ ಖಚಿತಪಡಿಸಿಕೊಳ್ಳಲು, ಅವರಿಗೆ ಸರಿಯಾದ ಸಮಯದಲ್ಲಿ,ಕೈಗೆಟುಕುವ ಬೆಲೆಯಲ್ಲಿ ಮತ್ತು ಗುಣಮಟ್ಟದ ರಸಗೊಬ್ಬರಗಳನ್ನು ಒದಗಿಸುವುದು ಅವಶ್ಯಕ ಎಂದು ಹೇಳಿದ್ದಾರೆ.
ಸೂಕ್ತ ಸ್ಥಳಗಳಲ್ಲಿ ಮತ್ತು ಅಗತ್ಯವಿದ್ದಾಗ ರಸಗೊಬ್ಬರಗಳ ಸಮರ್ಪಕ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವುದು ರಾಜ್ಯಗಳ ಜವಾಬ್ದಾರಿಯಾಗಿದೆ. ಆದ್ದರಿಂದ, ರಾಜ್ಯಗಳು ಕಾಳದಂಧೆ, ಅಧಿಕ ಬೆಲೆ ನಿಗದಿ ಮತ್ತು ಸಬ್ಸಿಡಿ ರಸಗೊಬ್ಬರಗಳ ದುರುಪಯೋಗದಂತಹ ಚಟುವಟಿಕೆಗಳನ್ನು ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ಮಾಡಬೇಕು ಮತ್ತು ಅವುಗಳ ವಿರುದ್ಧ ತ್ವರಿತ ಕ್ರಮ ತೆಗೆದುಕೊಳ್ಳಬೇಕು ಎಂದು ನಿರ್ದೇಶಿಸಿದ್ದಾರೆ.
ರಸಗೊಬ್ಬರ ಉತ್ಪಾದನೆ ಮತ್ತು ಮಾರಾಟದ ನಿಯಮಿತ ಮೇಲ್ವಿಚಾರಣೆ ಹಾಗೂ ಮಾದರಿ ಮತ್ತು ಪರೀಕ್ಷೆಯ ಮೂಲಕ ನಕಲಿ ಮತ್ತು ಕಳಪೆ ಗುಣಮಟ್ಟದ ಉತ್ಪನ್ನಗಳ ಮೇಲೆ ಕಟ್ಟುನಿಟ್ಟಿನ ನಿಯಂತ್ರಣವನ್ನು ಕಾಯ್ದುಕೊಳ್ಳಬೇಕು.
ಸಾಂಪ್ರದಾಯಿಕ ರಸಗೊಬ್ಬರಗಳ ಜೊತೆಗೆ ನ್ಯಾನೊ-ರಸಗೊಬ್ಬರಗಳು ಅಥವಾ ಜೈವಿಕ-ಉತ್ತೇಜಕ ಉತ್ಪನ್ನಗಳ ಬಲವಂತದ ಟ್ಯಾಗ್ ಮಾಡುವಿಕೆಯನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಸೂಚಿಸಿದ್ದಾರೆ.
ಅಪರಾಧಿಗಳ ವಿರುದ್ಧ ಪರವಾನಗಿಗಳನ್ನು ರದ್ದುಗೊಳಿಸುವುದು ಮತ್ತು ಎಫ್ ಐ ಆರ್ ಗಳನ್ನು ದಾಖಲಿಸುವುದು ಸೇರಿದಂತೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಶಿಕ್ಷೆಯನ್ನು ಖಚಿತಪಡಿಸಿಕೊಳ್ಳಲು ಪರಿಣಾಮಕಾರಿ ಕಾನೂನು ಕ್ರಮ ಜರುಗಿಸಬೇಕು. ನಕಲಿ ಉತ್ಪನ್ನಗಳನ್ನು ಗುರುತಿಸುವ ಬಗ್ಗೆ ರೈತರಿಗೆ ಶಿಕ್ಷಣ ನೀಡಲು ವಿಶೇಷ ಪ್ರಯತ್ನಗಳನ್ನು ಮಾಡಲು ರಾಜ್ಯಗಳಿಗೆ ಪ್ರತಿಕ್ರಿಯೆ ಮತ್ತು ಮಾಹಿತಿ ವ್ಯವಸ್ಥೆ ಅಭಿವೃದ್ಧಿಪಡಿಸಲು ನಿರ್ದೇಶಿಸಲಾಗಿದೆ.
ನಕಲಿ ಮತ್ತು ಕಳಪೆ ಗುಣಮಟ್ಟದ ಕೃಷಿ ಪರಿಕರಗಳ ಸಮಸ್ಯೆಯನ್ನು ಬೇರುಸಹಿತ ನಿರ್ಮೂಲನೆ ಮಾಡಲು ರಾಜ್ಯಾದ್ಯಂತ ಅಭಿಯಾನ ಪ್ರಾರಂಭಿಸುವಂತೆ ಸಚಿವರು ಎಲ್ಲಾ ರಾಜ್ಯಗಳಿಗೂ ಸೂಚಿಸಿದ್ದಾರೆ.