ಕೋಲ್ಕತ್ತಾ: ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಬಂಗಾಳಿ ಮಾತನಾಡುವ ಜನರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬುಧವಾರ ಮಧ್ಯಾಹ್ನ ಕೋಲ್ಕತ್ತಾದಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದರು.
ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಸೇರಿದಂತೆ ಪಕ್ಷದ ಹಿರಿಯ ನಾಯಕರು, ಮಮತಾ ಬ್ಯಾನರ್ಜಿ ಅವರಿಗೆ ಸಾಥ್ ನೀಡಿದರು.
ಇತರ ರಾಜ್ಯಗಳಲ್ಲಿ ಬಂಗಾಳಿಗಳಿಗೆ 'ಕಿರುಕುಳ' ಖಂಡಿಸಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಇಂದು ಮಧ್ಯಾಹ್ನ 1.45 ರ ಸುಮಾರಿಗೆ ಕೇಂದ್ರ ಕೋಲ್ಕತ್ತಾದ ಕಾಲೇಜು ಚೌಕದಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಜನ ಭಾಗವಹಿಸಿದ್ದರು. ಧರ್ಮತಾಲಾದ ಡೊರಿನಾ ಕ್ರಾಸಿಂಗ್‌ನಲ್ಲಿ ಮೆರವಣಿಗೆ ಕೊನೆಗೊಳ್ಳಲಿದೆ.
ಸುಮಾರು 3 ಕಿ.ಮೀ ಪ್ರತಿಭಟನಾ ಮೆರವಣಿಗೆ ನಡೆಯುತ್ತಿದ್ದು, ಭಾರಿ ಭದ್ರತೆ ಕೈಗೊಳ್ಳಲಾಗಿದೆ. ಸುಮಾರು 1,500 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಈ ಪ್ರತಿಭಟನಾ ಮೆರವಣಿಗೆ ಕಾರಣದಿಂದಾಗಿ ನಗರದ ಮಧ್ಯ ಭಾಗಗಳಲ್ಲಿ ವಾಹನ ಸಂಚಾರವನ್ನು ವಿವಿಧ ರಸ್ತೆಗಳಲ್ಲಿ ತಿರುಗಿಸಲಾಯಿತು.
ಪ್ರಧಾನಿ ನರೇಂದ್ರ ಮೋದಿ ಅವರ ಪಶ್ಚಿಮ ಬಂಗಾಳ ಭೇಟಿಗೆ ಒಂದು ದಿನ ಮುಂಚಿತವಾಗಿ ಈ ಪ್ರತಿಭಟನೆ ನಡೆಯುತ್ತಿದ್ದು, ರಾಜ್ಯಾದ್ಯಂತ ಜಿಲ್ಲಾ ಕೇಂದ್ರ ಪಟ್ಟಣಗಳಲ್ಲಿ ಟಿಎಂಸಿ ಇದೇ ರೀತಿಯ ಪ್ರತಿಭಟನೆ ಆಯೋಜಿಸಿದೆ.