ಘಾಜಿಯಾಬಾದ್: ಪವಿತ್ರ ಶ್ರಾವಣ ಮಾಸ ಹಾಗೂ ಕನ್ವಾರ್ ಯಾತ್ರೆಯ ಅವಧಿಯಲ್ಲಿ ಮಾಂಸ ಮಾರಾಟ ಮಾಡುತ್ತಿದ್ದನ್ನು ವಿರೋಧಿಸಿ KFC ಔಟ್ ಲೆಟ್ ನ್ನು ಬಲಪಂಥೀಯ ಸಂಘಟನೆಯ ಸದಸ್ಯರು ಧ್ವಂಸ ಮಾಡಿದ್ದಾರೆ ಎಂಬ ಆರೋಪ ಉತ್ತರ ಪ್ರದೇಶದ ಘಾಜಿಯಾಬಾದ್ ನಲ್ಲಿ ಕೇಳಿಬಂದಿದೆ.
ವಸುಂಧರ ಎಂಬ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಘಟನೆಯದ್ದು ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗತೊಡಗಿದೆ.
ಶ್ರಾವಣ ಸಮಯದಲ್ಲಿ ಈ ಪ್ರದೇಶದಲ್ಲಿ ಮಾಂಸಾಹಾರಿ ಆಹಾರ ಪದಾರ್ಥಗಳ ಮಾರಾಟದ ಮೇಲೆ ಅಧಿಕೃತ ನಿಷೇಧವಿಲ್ಲದಿದ್ದರೂ, ಗುಂಪೊಂದು ಫಾಸ್ಟ್-ಫುಡ್ ಔಟ್ಲೆಟ್ನಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲು ಮುಂದಾಯಿತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸೆರೆಯಾಗಿರುವ ಘಟನೆಯ ವೀಡಿಯೊ, ಗುಂಪೊಂದು 'ಭಾರತ್ ಮಾತಾ ಕಿ ಜೈ' ಮತ್ತು 'ಜೈ ಶ್ರೀ ರಾಮ್' ನಂತಹ ಘೋಷಣೆಗಳನ್ನು ಕೂಗುತ್ತಾ ರೆಸ್ಟೋರೆಂಟ್ ಸಿಬ್ಬಂದಿಯನ್ನು ಎದುರಿಸಿ ಬಲವಂತವಾಗಿ ಬಾಗಿಲು ಕೆಳಗಿಳಿಸುವುದನ್ನು ತೋರಿಸುತ್ತದೆ.
ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಅಭಿಷೇಕ್ ಶ್ರೀವಾಸ್ತವ್ ಈ ಘಟನೆಯ ಬಗ್ಗೆ ಮಾಹಿತಿ ನೀಡಿದ್ದು, "ಜುಲೈ 17 ರಂದು ಕೆಲವು ವ್ಯಕ್ತಿಗಳು ಆಹಾರ ಮಳಿಗೆಯಲ್ಲಿ ಗಲಾಟೆ ಮಾಡಿ ಅದನ್ನು ಮುಚ್ಚಲು ಪ್ರಯತ್ನಿಸಿದ ಘಟನೆ ನಮ್ಮ ಗಮನಕ್ಕೆ ಬಂದಿತು. ಪೊಲೀಸರು ತಕ್ಷಣ ಸ್ಥಳಕ್ಕೆ ತಲುಪಿ, ಅವರನ್ನು ಚದುರಿಸಿದರು ಮತ್ತು ಆಹಾರ ಮಳಿಗೆಯಲ್ಲಿ ಕಾರ್ಯಾಚರಣೆ ಸುಗಮವಾಗುವಂತೆ ನೋಡಿಕೊಂಡರು" ಎಂದು ಹೇಳಿದ್ದಾರೆ.
"ಘಟನೆಗೆ ಸಂಬಂಧಿಸಿದಂತೆ ಇಂದಿರಾಪುರಂ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಪ್ರಕರಣ ದಾಖಲಾಗಿದೆ. ಈ ಎಲ್ಲ ವ್ಯಕ್ತಿಗಳನ್ನು ಗುರುತಿಸಲಾಗುತ್ತಿದೆ, ಮುಂದಿನ ಕ್ರಮ ಕೈಗೊಳ್ಳಲಾಗುವುದು" ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.