ದುರ್ಗಾಪುರ: ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ಇತ್ತೀಚಿಗೆ ನಡೆದ ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಟಿಎಂಸಿ ಸರ್ಕಾರ ರಕ್ಷಿಸುತ್ತಿದ್ದು, ಅಭಿವೃದ್ಧಿಗೆ ಅಡ್ಡಿಪಡಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಆರೋಪಿಸಿದ್ದಾರೆ.
ದುರ್ಗಾಪುರದಲ್ಲಿ ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಇಲ್ಲಿ ಯುವ ಮಹಿಳಾ ವೈದ್ಯರೊಬ್ಬರು ದೌರ್ಜನ್ಯಕ್ಕೆ ಒಳಗಾದಾಗ ಆರೋಪಿಗಳನ್ನು ರಕ್ಷಿಸುವಲ್ಲಿ ಟಿಎಂಸಿ ಸರ್ಕಾರ ಹೇಗೆ ತೊಡಗಿದೆ ಎಂಬುದನ್ನು ನೀವೆಲ್ಲರೂ ನೋಡಿದ್ದೀರಿ. ಆ ಘಟನೆಯಿಂದ ದೇಶ ಇನ್ನೂ ಚೇತರಿಸಿಕೊಂಡಿಲ್ಲದಿರುವಾಗ ಮತ್ತೊಂದು ಕಾಲೇಜಿನಲ್ಲಿ ಇನ್ನೊಬ್ಬ ಯುವತಿಯ ಮೇಲೆ ಹೇಯಕೃತ್ಯ ನಡೆದಿದೆ. ಈ ಎರಡು ಕೇಸ್ ಗಳಲ್ಲಿನ ಆರೋಪಿಗಳು ಟಿಎಂಸಿ ಸರ್ಕಾರದೊಂದಿಗೆ ನಂಟು ಹೊಂದಿರುವುದು ತಿಳಿದುಬಂದಿದೆ ಎಂದರು.
ಆಡಳಿತಾರೂಢ ಪಕ್ಷ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂದು ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ಮಹಿಳೆಯರಿಗೆ ಸುರಕ್ಷತೆ ನೀಡುವಲ್ಲಿ ಮತ್ತು ರಾಜ್ಯದಲ್ಲಿ ನ್ಯಾಯ ಕಾಪಾಡುವಲ್ಲಿ ಟಿಎಂಸಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.
ಮುರ್ಷಿದಾಬಾದ್ ನಂತಹ ಹಿಂಸಾಚಾರಗಳು ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿವೆ. ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಪಶ್ಚಿಮ ಬಂಗಾಳದಲ್ಲಿ ನ್ಯಾಯ ಸಿಗದಂತಾಗಿದೆ. ರಾಜ್ಯ ಸರ್ಕಾರ ಜನರ ಜೀವ ಕಾಪಾಡುವಲ್ಲಿ ನಿರ್ಲಕ್ಷ್ಯ ವಹಿಸಿದೆ. ಟಿಎಂಸಿ ಸರ್ಕಾರ ಉದ್ಯಮಿಗಳಿಂದ ಹಣ ಸುಲಿಗೆ ಮಾಡುತ್ತಿದ್ದು, ರಾಜ್ಯದಲ್ಲಿನ ಆರ್ಥಿಕ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂದು ಟೀಕಾ ಪ್ರಹಾರ ನಡೆಸಿದರು.
ಪಶ್ಚಿಮ ಬಂಗಾಳದಲ್ಲಿ ಉದ್ಯಮಿಗಳಿಂದ ಹಣಕ್ಕಾಗಿ ಒತ್ತಡ ಹಾಕಲಾಗುತ್ತಿದೆ. ಅವರಿಗೆ ಟಿಎಂಸಿ ಕಾರ್ಯಕರ್ತರಿಂದ ಬೆದರಿಕೆ ವೊಡ್ಡಲಾಗುತ್ತಿದೆ. ಟಿಎಂಸಿಯ 'ಗೂಂಡಾ ಟ್ಯಾಕ್ಸ್' ರಾಜ್ಯದಲ್ಲಿ ಹೂಡಿಕೆಗೆ ತೊಡಕಾಗಿದೆ ಎಂದು ಆರೋಪಿಸಿದರು.