ನವದೆಹಲಿ: ಭಾರತ-ಪಾಕಿಸ್ತಾನ ಸಂಘರ್ಷದ ವೇಳೆ 5 ಜೆಟ್ ಗಳ ನಾಶವಾಗಿದೆ, ವ್ಯಾಪಾರ ಒಪ್ಪಂದ ಬೆದರಿಕೆ ಹಾಕಿ ಯುದ್ಧ ನಿಲ್ಲಿಸಿದ್ದೇವೆಂದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿಕೆ ನೀಡಿದ್ದು, ಹೇಳಿಕೆ ಸಂಬಂಧ ಸಂಸತ್ತಿನಲ್ಲಿ ಸ್ಪಷ್ಟನೆ ನೀಡುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಕಾಂಗ್ರೆಸ್ ಆಗ್ರಹಿಸಿದೆ.
ಟ್ರಂಪ್ ಅವರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು, "ಮೇ 10 ರಿಂದ ಇಂದಿನವರೆಗೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 24 ಬಾರಿ ಇದೇ ರೀತಿಯ ಹೇಳಿಕೆಗಳನ್ನು ನೀಡಿದ್ದಾರೆ. ಅಣ್ವಸ್ತ್ರಗಳನ್ನು ಹೊಂದಿರುವ ಭಾರತ- ಪಾಕ್ ನಡುವಿನ ಯುದ್ಧವನ್ನು ಅಮೆರಿಕ ನಿಲ್ಲಿಸಿದೆ, ಯುದ್ಧ ಮುಂದುವರಿದರೆ ಯಾವುದೇ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವುದಿಲ್ಲ, ಭಾರತ ಮತ್ತು ಪಾಕಿಸ್ತಾನ ಅಮೆರಿಕ ಜೊತೆ ವ್ಯಾಪಾರ ಒಪ್ಪಂದವನ್ನು ಬಯಸಿದರೆ, ತಕ್ಷಣ ಕದನ ವಿರಾಮಕ್ಕೆ ಒಪ್ಪಿಕೊಳ್ಳಬೇಕು ಎಂದು ಹೇಳಿದ್ದರು.
ಇದೀಗ ಭಾರತ –ಪಾಕ್ ಸಂಘರ್ಷದ ವೇಳೆ ಐದು ಜೆಟ್‌ಗಳ ನಾಶವಾಗಿದೆ ಎಂದು ಡೊನಾಲ್ಡ್ ಟ್ರಂಪ್ ಮತ್ತೆ ಹೇಳಿದ್ದಾರೆ.
2019ರ ಸೆಪ್ಟೆಂಬರ್‌ನಲ್ಲಿ ʼಹೌಡಿ ಮೋದಿʼ ಮತ್ತು 2020ರ ಫೆಬ್ರವರಿಯಲ್ಲಿ ನಮಸ್ತೆ ಟ್ರಂಪ್ ಮೂಲಕ ಟ್ರಂಪ್ ಅವರೊಂದಿಗೆ ಸ್ನೇಹ ಮತ್ತು ಗೆಳೆತನವನ್ನು ಹೊಂದಿರುವ ಪ್ರಧಾನಿ, ಟ್ರಂಪ್ ಕಳೆದ 70 ದಿನಗಳಿಂದ ಏನು ಹೇಳಿಕೊಂಡು ಬರುತ್ತಿದ್ದಾರೆ ಎಂಬ ಬಗ್ಗೆ ಸಂಸತ್ತಿನಲ್ಲಿ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಮುಂಬರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಭಾರತ-ಪಾಕಿಸ್ತಾನ ಕದನ ವಿರಾಮದ ಕುರಿತು ಟ್ರಂಪ್ ಅವರು ನೀಡಿರುವ ಹೇಳಿಕೆಗಳ ಕುರಿತು ಮೋದಿ ಉತ್ತರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಶ್ವೇತಭವನದಲ್ಲಿ ಮಾತನಾಡಿರುವ ಟ್ರಂಪ್ ಅವರು, ʼನಾವು ಬಹಳಷ್ಟು ಯುದ್ಧಗಳನ್ನು ನಿಲ್ಲಿಸಿದ್ದೇವೆ. ಭಾರತ ಮತ್ತು ಪಾಕಿಸ್ತಾನ ನಡವೆ ಯದ್ಧ ನಡೆಯುತ್ತಿತ್ತು. ಹಾರಾಟದ ಸಂದರ್ಭದಲ್ಲೇ ಯುದ್ಧ ವಿಮಾನಗಳನ್ನು ಹೊಡೆದುರುಳಿಸಲಾಗಿದೆ. ವಾಸ್ತವವಾಗಿ ಐದು ಜೆಟ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ನಾನು ಭಾವಿಸುತ್ತೇನೆ. ನೀವು ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಬಯಸುತ್ತೀರಿ. ನೀವು ಯುದ್ಧ ಮುಂದುವರಿಸುವುದಾದರೆ ನಾವು ವ್ಯಾಪಾರ ಒಪ್ಪಂದ ಮಾಡುವುದಿಲ್ಲ ಎಂದು ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವ ಎರಡು ದೇಶಕ್ಕೆ ಹೇಳಿರುವುದಾಗಿ ಟ್ರಂಪ್ ಹೇಳಿದ್ದರು.