ಚಂಡೀಗಢ: ಗಾಯಕಿ ಹಾಗೂ ಎಎಪಿ ನಾಯಕಿ ಅನ್ಮೋಲ್ ಗಗನ್ ಮಾನ್ ಅವರು ಪಂಜಾಬ್ ವಿಧಾನಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ರಾಜಕೀಯ ತೊರೆಯಲು ನಿರ್ಧರಿಸಿರುವುದಾಗಿ ಶನಿವಾರ ಹೇಳಿದ್ದಾರೆ.
ಖರಾರ್ ಕ್ಷೇತ್ರದ ಶಾಸಕಿ ಮಾನ್ ಅವರು ತಮ್ಮ ರಾಜೀನಾಮೆ ಪತ್ರವನ್ನು ಪಂಜಾಬ್ ವಿಧಾನಸಭಾ ಸ್ಪೀಕರ್ ಕುಲ್ತಾರ್ ಸಿಂಗ್ ಸಂಧ್ವಾನ್ ಅವರಿಗೆ ಕಳುಹಿಸಿದ್ದಾರೆ.
"ನನ್ನ ಹೃದಯ ಭಾರವಾಗಿದೆ, ಆದರೆ ನಾನು ರಾಜಕೀಯ ತೊರೆಯಲು ನಿರ್ಧರಿಸಿದ್ದೇನೆ. ಹೀಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಸ್ಪೀಕರ್ ನನ್ನ ರಾಜೀನಾಮೆಯನ್ನು ಅಂಗೀಕರಿಸಬೇಕು. ಪಕ್ಷಕ್ಕೆ ನನ್ನ ಶುಭಾಶಯಗಳು. ಪಂಜಾಬ್ ಸರ್ಕಾರ ಜನರ ನಿರೀಕ್ಷೆಗಳಿಗೆ ತಕ್ಕಂತೆ ಕೆಲಸ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ" ಎಂದು ಮಾನ್ ಅವರು X ನಲ್ಲಿ ಪಂಜಾಬಿಯಲ್ಲಿ ಪೋಸ್ಟ್ ಮಾಡಿದ್ದಾರೆ.
ಗಾಯಕಿಯಾಗಿರುವ ಮಾನ್ ಅವರು ಎಎಪಿ ಸೇರಿ, 2022 ರ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಖರಾರ್ ವಿಧಾನಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು. ಸಚಿವೆಯಾಗಿಯೂ ಕೆಲಸ ಮಾಡಿರುವ ಮಾನ್, ಪ್ರವಾಸೋದ್ಯಮ ಮತ್ತು ಸಂಸ್ಕೃತಿ, ಬಂಡವಾಳ ಹೂಡಿಕೆ ಪ್ರಚಾರ, ಕಾರ್ಮಿಕ ಮತ್ತು ಆತಿಥ್ಯ ಖಾತೆಗಳನ್ನು ಹೊಂದಿದ್ದರು.
ಆದರೆ ಕಳೆದ ವರ್ಷ, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು, ಅನ್ಮೋಲ್ ಗಗನ್ ಮಾನ್ ಸೇರಿದಂತೆ ನಾಲ್ಕು ಸಚಿವರನ್ನು ತಮ್ಮ ಸಂಪುಟದಿಂದ ಕೈಬಿಟ್ಟಿದ್ದರು.