ಗುಜರಾತ್‌ನ ಕಚ್ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರನ್ನು ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದ ಸಿಆರ್‌ಪಿಎಫ್ ಕಾನ್‌ಸ್ಟೆಬಲ್ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಆರೋಪಿ ದಿಲೀಪ್ ಡಾಂಗ್ಚಿಯಾ, ಸಂತ್ರಸ್ತೆಯನ್ನು ನಿಯೋಜಿಸಲಾಗಿದ್ದ ಅಂಜರ್ ಪೊಲೀಸ್ ಠಾಣೆಗೆ ಶನಿವಾರ ಬೆಳಿಗ್ಗೆ ಶರಣಾಗಿದ್ದಾನೆ.
ಅರುಣಾಬೆನ್ ನಟುಭಾಯ್ ಜಾದವ್ ಎಂಬ ಮಹಿಳೆ ಕಚ್‌ನ ಅಂಜರ್ ಪೊಲೀಸ್ ಠಾಣೆಯಲ್ಲಿ ಸಹಾಯಕ ಸಬ್-ಇನ್ಸ್‌ಪೆಕ್ಟರ್ (ಎಎಸ್‌ಐ) ಆಗಿ ಸೇವೆ ಸಲ್ಲಿಸುತ್ತಿದ್ದರು.
ಶುಕ್ರವಾರ ರಾತ್ರಿ 25 ವರ್ಷದ ಅರುಣಾಬೆನ್ ಮತ್ತು ಆಕೆಯ ಪ್ರಿಯಕರ ಅಂಜಾರ್‌ನಲ್ಲಿರುವ ತಮ್ಮ ಮನೆಯಲ್ಲಿ ಜಗಳವಾಡಿದ್ದಾರೆ. ಈ ಸಂದರ್ಭದಲ್ಲಿ ಅರುಣಾ ಆರೋಪಿಯ ತಾಯಿಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
'ಇದರಿಂದ ವಿಕೋಪಕ್ಕೆ ತಿರುಗಿದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ದಿಲೀಪ್ ಕೋಪದಿಂದ ಅರುಣಾಬೆನ್‌ಳನ್ನು ಕತ್ತು ಹಿಸುಕಿ ಕೊಂದಿದ್ದಾನೆ' ಎಂದು ಅಂಜಾರ್ ವಿಭಾಗದ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿವೈಎಸ್‌ಪಿ) ಮುಖೇಶ್ ಚೌಧರಿ ಹೇಳಿದ್ದಾರೆ.
ಮಣಿಪುರದಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ (CRPF)ಯಲ್ಲಿ ನಿಯೋಜಿತರಾಗಿರುವ ಆರೋಪಿಯು ಅರುಣಾ ಜೊತೆ ದೀರ್ಘಕಾಲದ ಸಂಬಂಧ ಹೊಂದಿದ್ದನು. ಇಬ್ಬರೂ ಮದುವೆಯಾಗಲು ಯೋಜಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
Instagram ಮೂಲಕ ಪರಿಚಯವಾಗಿದ್ದ ಅವರು 2021 ರಿಂದ ಪರಸ್ಪರ ಸಂಪರ್ಕದಲ್ಲಿದ್ದರು ಮತ್ತು ಅಂದಿನಿಂದ ಒಟ್ಟಿಗೆ ವಾಸಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.