ಇಟಲಿ: ಇಟಲಿಯಲ್ಲಿ ನಡೆದ GT4 ಯುರೋಪಿಯನ್ ಸೀರೀಸ್ ನ ಕಾರು ರೇಸ್ ವೇಳೆ ತಮಿಳು ನಟ ಮತ್ತು ರೇಸರ್ ಅಜಿತ್ ಕುಮಾರ್ ಅವರ ಕಾರು ಮತ್ತೊಮ್ಮೆ ಅಪಘಾತಕ್ಕೀಡಾಗಿದೆ. GT4 ಯುರೋಪಿಯನ್ ಸೀರೀಸ್ ನ ಮಿಸಾನೊ ಟ್ರಾಕ್ ನಲ್ಲಿ ಕಾರು ಅಪಘಾತಕ್ಕೀಡಾಗಿದ್ದು, ಅಜಿತ್ ಕುಮಾರ್ ಅವರು ರೇಸ್ ನಿಂದ ಹೊರ ಬಿದ್ದಿದ್ದಾರೆ.
GT4 ಯುರೋಪಿಯನ್ ಸೀರೀಸ್ ನ ಅಧಿಕೃತ ಎಕ್ಸ್ ಖಾತೆಯಲ್ಲಿ ಅಜಿತ್ ಕಾರು ಅಪಘಾತಕ್ಕೀಡಾದ ನಂತರದ ವಿಡಿಯೋವೊಂದನ್ನು ಹಂಚಿಕೊಂಡಿದೆ.
ಟ್ರಾಕ್ ನಲ್ಲಿ ಕಾರುವೊಂದಕ್ಕೆ ಅಜಿತ್ ಕಾರು ಡಿಕ್ಕಿಯಾಗಿದೆ. ಆದರೆ, ಅಜಿತ್ ಅವರಿಗೆ ಯಾವುದೇ ಗಾಯಗಳಾಗಿಲ್ಲ. ಅಪಘಾತದ ಬಳಿಕ ಕಾರಿನ ಪಕ್ಕ ನಿಂತಿರುವ ಅಜಿತ್, ಅವಶೇಷಗಳನ್ನು ತೆಗೆದುಹಾಕುತ್ತಿರುವ ದೃಶ್ಯವನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
2003ರಲ್ಲಿ ಫಾರ್ಮುಲಾ ಏಷ್ಯಾ ಬಿಎಂಡಬ್ಲ್ಯೂ ಚಾಂಪಿಯನ್ ಶಿಪ್ ಮೂಲಕ ಮೊದಲ ಬಾರಿಗೆ ಕಾರು ರೇಸಿಂಗ್ ನಲ್ಲಿ ಎಂಟ್ರಿ ನೀಡಿದ್ದ ಅಜಿತ್ ಕುಮಾರ್, 2010ರಲ್ಲಿ ಪಾರ್ಮುಲಾ 2 ಚಾಂಪಿಯನ್ ಶಿಪ್ ನಲ್ಲಿ ಗೆಲುವು ಸಾಧಿಸಿದ್ದರು.
ಈ ವರ್ಷದ ಜನವರಿಯಲ್ಲಿ ದುಬೈನಲ್ಲಿ ನಡೆದ 24 ಗಂಟೆಗಳ ಕಾರ್ ರೇಸ್‌ನಲ್ಲಿ ಭಾಗವಹಿಸಿದ್ದರು. ಅವರ ತಂಡವು 992ನೇ ವಿಭಾಗದಲ್ಲಿ ಮೂರನೇ ಸ್ಥಾನವನ್ನು ಗಳಿಸಿತ್ತು.
ಫೆಬ್ರವರಿಯಲ್ಲಿ ಸ್ಪೇನ್ ನ ವಲೆನ್ಸಿಯಾದಲ್ಲಿ ನಡೆದ ಪೋಶೆ ಸ್ಪ್ರಿಂಟ್ ಚಾಲೆಂಜ್ ಕಾರು ರೇಸಿಂಗ್ ಸ್ಪರ್ಧೆಯಲ್ಲಿ ಅಜಿತ್ ಕುಮಾರ್ ಅವರ ಕಾರು ಎರಡು ಭಾರಿ ಅಪಘಾತಕ್ಕೀಡಾಗಿತ್ತು. ಆಗಲೂ ಅಪಾಯದಿಂದ ಪಾರಾಗಿದ್ದರು.