ನವದೆಹಲಿ: ಉಪ ರಾಷ್ಟ್ರಪತಿ ಸ್ಥಾನಕ್ಕೆ ಜಗದೀಪ್ ಧಂಖರ್ ಅವರ ಹಠಾತ್ ರಾಜೀನಾಮೆ ನಂತರ ಇಂದು ಮಂಗಳವಾರ ರಾಷ್ಟ್ರ ರಾಜಧಾನಿಯ ರಾಜಕೀಯ ಕಾರಿಡಾರ್ ನಲ್ಲಿ ಬಿಸಿಬಿಸಿ ಚರ್ಚೆಯಾಗುತ್ತಿದ್ದು, ಅವರ ಉತ್ತರಾಧಿಕಾರಿಯ ಬಗ್ಗೆ ಊಹಾಪೋಹಗಳು ಕೇಳಿಬರುತ್ತಿವೆ.
ಜಗದೀಪ್ ಧನ್ ಕರ್ ಅವರ ರಾಜೀನಾಮೆಯ ಹಿಂದೆ ಬೇರೆ ಬಲವಾದ ಕಾರಣಗಳಿರಬಹುದು, ಅನಾರೋಗ್ಯ ಹಿನ್ನೆಲೆ ಕಾರಣವಿರಲಿಕ್ಕಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಇಬ್ಬರು ನ್ಯಾಯಾಧೀಶರನ್ನು ತೆಗೆದುಹಾಕುವ ಪ್ರಸ್ತಾವಿತ ಪ್ರಸ್ತಾವನೆಯಲ್ಲಿ ಜಗದೀಪ್ ಧನ್ ಕರ್ ಮತ್ತು ಸರ್ಕಾರದ ನಡುವಿನ ಭಿನ್ನಾಭಿಪ್ರಾಯಗಳನ್ನು ಅನೇಕರು ಉಲ್ಲೇಖಿಸಿದ್ದಾರೆ.
ಇಂದು ಉಪ ರಾಷ್ಟ್ರಪತಿಯವರ ರಾಜೀನಾಮೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಗೀಕರಿಸಿದ್ದಾರೆ ಎಂದು ರಾಜ್ಯಸಭೆಗೆ ತಿಳಿಸಲಾಯಿತು, ಗೃಹ ಸಚಿವಾಲಯವು ರಾಜೀನಾಮೆ ತಕ್ಷಣವೇ ಜಾರಿಗೆ ಬರಲಿದೆ ಎಂದು ಅಧಿಸೂಚನೆಯನ್ನು ಹೊರಡಿಸಿತು.
ಧನ್ಕರ್ ಅವರ ನಿರ್ಧಾರಕ್ಕೆ ನಿಖರವಾದ ಕಾರಣಗಳು ಸ್ಪಷ್ಟವಾಗಿಲ್ಲವಾದರೂ, ಉಪ ರಾಷ್ಟ್ರಪತಿ ಚುನಾವಣೆಗೆ ಸಂಭಾವ್ಯ ಅಭ್ಯರ್ಥಿಗಳಾಗಿ ಹಲವಾರು ಹೆಸರುಗಳು ಈಗಾಗಲೇ ಕೇಳಿಬರುತ್ತಿವೆ.
ಕೇಂದ್ರದ ಎನ್‌ಡಿಎ ಸಂಪುಟದ ರಾಜ್ಯ ಸಚಿವ ಮತ್ತು ಭಾರತ ರತ್ನ ಪ್ರಶಸ್ತಿ ಪುರಸ್ಕೃತ, ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರ ಪುತ್ರ ರಾಮನಾಥ್ ಠಾಕೂರ್; ಬಿಹಾರ ರಾಜ್ಯಪಾಲ ಮೊಹಮ್ಮದ್ ಆರಿಫ್ ಖಾನ್; ಮತ್ತು ಬಿಜೆಪಿ ನಾಯಕ ಮುಖ್ತಾರ್ ಅಬ್ಬಾಸ್ ನಖ್ವಿ ಅವರ ಹೆಸರುಗಳು ಬಲವಾಗಿ ಕೇಳಿಬರುತ್ತಿವೆ.
ಈ ವರ್ಷದ ಕೊನೆಯಲ್ಲಿ ಬಿಹಾರ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ನಿತೀಶ್ ಕುಮಾರ್ - ಅವರ ಪಕ್ಷ ಜೆಡಿ(ಯು) ರಾಜ್ಯ ಮತ್ತು ಕೇಂದ್ರ ಎರಡರಲ್ಲೂ ಎನ್‌ಡಿಎ ಸರ್ಕಾರಗಳ ಭಾಗವಾಗಿದೆ. ಅವರ ಹೆಸರು ಕೂಡ ಮತ್ತೆ ಕೇಳಿಬಂದಿದೆ,
ಉಪ ರಾಷ್ಟ್ರಪತಿ ಚುನಾವಣೆಯನ್ನು ನಡೆಸಲು ಸರ್ಕಾರವು ಸಮಯ ತೆಗೆದುಕೊಳ್ಳುತ್ತದೆ ಎಂದು ಮೂಲಗಳು ಹೇಳುತ್ತವೆ. ಚುನಾವಣೆ ನಡೆಸಲು 60 ದಿನಗಳವರೆಗೆ ಅವಕಾಶ ಇರುತ್ತದೆ. ಸರ್ಕಾರದ ಪರಿಗಣನೆಗಳನ್ನು ಅವಲಂಬಿಸಿ ಪ್ರಕ್ರಿಯೆಯನ್ನು ತ್ವರಿತಗೊಳಿಸಬಹುದು.