ಮುಂಬೈ: 'ಬಿಗ್ ಬಾಸ್ OTT 3' ನಲ್ಲಿ ಕಾಣಿಸಿಕೊಂಡಿದ್ದ ಯೂಟ್ಯೂಬರ್ ಅರ್ಮಾನ್ ಮಲಿಕ್ ಪತ್ನಿ ನಟಿ ಪಾಯಲ್ ಮಲ್ಲಿಕ್ ಕಾಳಿಮಾತೆ ವೇಷ ಧರಿಸಿ ವಿಡಿಯೋ ಮಾಡುವ ಮೂಲಕ ಹೊಸ ವಿವಾದ ಸೃಷ್ಟಿಸಿದ್ದು, ಈ ಕುರಿತು ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಲೇ ಕ್ಷಮೆಯಾಚಿಸಿದ್ದಾರೆ.
ಈ ಹಿಂದೆ ಬಿಗ್ ಬಾಸ್ OTT 3' ನಲ್ಲಿ ತಮ್ಮ ಇಬ್ಬರು ಪತ್ನಿಯರೊಂದಿಗೆ ಕಾಣಿಸಿಕೊಂಡಿದ್ದ ಯೂಟ್ಯೂಬರ್ ಅರ್ಮಾನ್ ಮಲಿಕ್ ಇದೀಗ ಮತ್ತೆ ಸುದ್ದಿಗೆ ಗ್ರಾಸವಾಗಿದ್ದು, ಈ ಬಾರಿ ಅರ್ಮಾನ್ ಮಲ್ಲಿಕ್ ಪತ್ನಿ ಪಾಯಲ್ ಹೊಸ ವಿವಾದಕ್ಕೆ ಸಿಲುಕಿದ್ದಾರೆ.
ಪಾಯಲ್ ಕಾಳಿಮಾತೆ ವೇಷಧರಿಸಿ ವಿಡಿಯೋ ತಯಾರಿಸಿ ಅದನ್ನು ತಮ್ಮ ವ್ಲಾಗ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ.
ಇದು ವಿವಾದಕ್ಕೆ ಕಾರಣವಾಗಿದ್ದು, ಪಾಯಲ್ ಅವರ ನಡೆಯ ವಿರುದ್ಧ ಶಿವಸೇನಾ ಹಿಂದ್ ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ. ಅಲ್ಲದೆ ಪಾಯಲ್ ಕೂಡಲೇ ಕ್ಷಮೆಯಾಚಿಸದಿದ್ದರೆ ತೀವ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದೆ. ಅಂದಹಾಗೆ ಪಾಯಲ್ ಕಾಳಿಮಾತೆ ವೇಷ ತೊಟ್ಟು ಹಿಂದೂ ದೇವರುಗಳಿಗೆ ಅಪಮಾನ ಮಾಡಿದ್ದಾರೆ ಎಂದು ಸಂಘಟನೆ ಆರೋಪಿಸಿದೆ.
ಶಿವಸೇನಾ ಹಿಂದ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದೀಪಾಂಶು ಸೂದ್ ಅವರು ಮಾತನಾಡಿ ಯೂಟ್ಯೂಬ್ ವ್ಯೂಸ್ ಗಾಗಿ ಹಿಂದೂ ದೇವರುಗಳ ಬಳಕೆ ಅಕ್ಷಮ್ಯ.. ಅರ್ಮಾನ್ ಮಲ್ಲಿಕ್ ಪತ್ನಿಯ ಈ ಕೃತ್ಯದಿಂದ ಧಾರ್ಮಿಕ ಭಾವನೆಗಳಿಗೆ ನೋವುಂಟಾಗಿದೆ ಎಂದು ಹೇಳಿದ್ದರು.
ಈ ವಿವಾದದ ಬೆನ್ನಲ್ಲೇ ಎಚ್ಚೆತ್ತುಕೊಂಡ ಪಾಯಲ್ ಮಲ್ಲಿಕ್, ಜುಲೈ 20 ರಂದು ಪಾಯಲ್ ಪಟಿಯಾಲ ತಲುಪಿ ಅಲ್ಲಿನ ಕಾಳಿ ಮಾತ ದೇವಸ್ಥಾನದಲ್ಲಿ ಕ್ಷಮೆಯಾಚಿಸಿದರು.