ಗ್ವಾಲಿಯರ್: ಗ್ವಾಲಿಯರ್-ಶಿವಪುರಿ ಲಿಂಕ್ ರಸ್ತೆಯಲ್ಲಿ ಮಂಗಳವಾರ ತಡರಾತ್ರಿ ವೇಗವಾಗಿ ಬಂದ ಕಾರೊಂದು ಕನ್ವರ್ ಯಾತ್ರಿಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕನ್ವರ್ ಯಾತ್ರಿಗಳು ಉತ್ತಿಲ ಗ್ರಾಮದ ಭದವ್ನಾ ಕುಂಡ್‌ನಿಂದ ಕಾಲ್ನಡಿಗೆಯಲ್ಲಿ ಹಿಂತಿರುಗುತ್ತಿದ್ದಾಗ ಗ್ವಾಲಿಯರ್‌ನ ಶೀತ್ಲಾ ಮಾತಾ ದೇವಾಲಯದ ಬಳಿ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ.
ಪೊಲೀಸರ ಪ್ರಕಾರ, ಇಂದೋರ್ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ(ಆರ್‌ಟಿಒ) ನೋಂದಾಯಿಸಲಾದ ಕಾರು ಅತಿ ವೇಗವಾಗಿ ಚಲಿಸುತ್ತಿದ್ದಾಗ ಟೈರ್ ಸ್ಫೋಟಗೊಂಡ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಯಾತ್ರಿಕರಿಗೆ ಡಿಕ್ಕಿ ಹೊಡೆದಿದೆ.
ವಾಹನವು ಯಾತ್ರಿಕರಿಗೆ ಡಿಕ್ಕಿ ಹೊಡೆದು ನಂತರ ಕಂದಕಕ್ಕೆ ಬಿದ್ದಿದೆ. ಈ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇತರ ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಕಂಪು ಪೊಲೀಸ್ ಠಾಣೆಯ ಉಸ್ತುವಾರಿ ಅಮರ್ ಸಿಂಗ್ ಸಿಕಾರ್ವಾರ್ ಅವರು ತಿಳಿಸಿದ್ದಾರೆ.
"ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ಗಾಯಾಳುಗಳನ್ನು ಚಿಕಿತ್ಸೆಗಾಗಿ ಜಯರೋಗ ಆಸ್ಪತ್ರೆಗೆ ಕರೆದೊಯ್ಯಲಾಯಿತು" ಎಂದು ಅವರು ಹೇಳಿದ್ದಾರೆ.