ನವದೆಹಲಿ: ಇಂಗ್ಲೆಂಡ್ ಜೊತೆಗಿನ ಮುಕ್ತ ವ್ಯಾಪಾರ ಒಪ್ಪಂದದಿಂದ 75,000 ಕ್ಕೂ ಹೆಚ್ಚು ಭಾರತೀಯ ಉದ್ಯೋಗಿಗಳು ಮತ್ತು 900 ಕ್ಕೂ ಹೆಚ್ಚು ಉದ್ಯೋಗದಾತರಿಗೆ ಪ್ರಯೋಜನವಾಗಲಿದೆ ಎಂದು ಅಂದಾಜಿಸಲಾಗಿದೆ.
ಇದು ಯುಕೆಯಲ್ಲಿ ಪೋಸ್ಟ್ ಮಾಡಲಾದ ಭಾರತೀಯ ವೃತ್ತಿಪರರಿಗೆ, ಮೂರು ವರ್ಷಗಳವರೆಗೆ ಸಾಮಾಜಿಕ ಭದ್ರತಾ ಕೊಡುಗೆಗಳನ್ನು ಪಾವತಿಸುವುದರಿಂದ ವಿನಾಯಿತಿ ನೀಡುತ್ತದೆ ಎಂದು ವಾಣಿಜ್ಯ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
283 ಬಿಲಿಯನ್ ಡಾಲರ್ ಮೊತ್ತದ ಭಾರತದ ಐಟಿ ಉದ್ಯಮಕ್ಕೆ ಯುಕೆ ಎರಡನೇ ಅತಿದೊಡ್ಡ ರಫ್ತು ಮಾರುಕಟ್ಟೆಯಾಗಿರುವುದರಿಂದ ಈ ಕ್ರಮ ಮಹತ್ವದ್ದಾಗಿದೆ. ಅಲ್ಲದೇ ರಫ್ತು ವಲಯಕ್ಕೆ ಶೇಕಡಾ 17 ರಷ್ಟು ಕೊಡುಗೆ ನೀಡುತ್ತದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್, DCC ಭಾಗವಾಗಿ (The Double Contribution Convention ) ಮೂರು ವರ್ಷಗಳವರೆಗೆ ಸಾಮಾಜಿಕ ಭದ್ರತಾ ಕೊಡುಗೆ ಪಾವತಿಸುವುದರಿಂದ ವಿನಾಯಿತಿ ನೀಡುವುದರಿಂದ ಭಾರತೀಯ ಉದ್ಯೋಗಿಗಳು ಮತ್ತು ಅವರ ಉದ್ಯೋಗದಾತರಿಗೆ ಗಮನಾರ್ಹ ಪ್ರಗತಿ ಎಂದಿದ್ದಾರೆ.
ಮುಕ್ತ ವ್ಯಾಪಾರದೊಂದಿಗೆ DCCಯಿಂದ ಉಭಯ ದೇಶಗಳ ಉದ್ಯೋಗಿಗಳು ತಾತ್ಕಾಲಿಕವಾಗಿ ಕೆಲಸ ಮಾಡುವಾಗ, ತಮ್ಮ ಸಾಮಾಜಿಕ ಭದ್ರತೆಗೆ ದುಪ್ಪಟ್ಟು ಕೊಡುಗೆಗಳನ್ನು ಪಾವತಿಸಬೇಕಾಗಿಲ್ಲ.
ಭಾರತ ಮತ್ತು ಯುಕೆ ಗುರುವಾರ ಮುಕ್ತ ವ್ಯಾಪಾರ ಒಪ್ಪಂದಕ್ಕೆ (ಎಫ್‌ಟಿಎ) ಸಹಿ ಹಾಕಿವೆ. ಇದರಿಂದ ಬ್ರಿಟಿಷ್ ವಿಸ್ಕಿ, ಕಾರುಗಳು ಮತ್ತಿತರ ದುಬಾರಿ ವಸ್ತುಗಳ ಮೇಲಿನ ಸುಂಕವನ್ನು ಕಡಿತಗೊಳಿಸುತ್ತದೆ. ಜೊತೆಗೆ ವಾರ್ಷಿಕವಾಗಿ ಸುಮಾರು 34 ಬಿಲಿಯನ್ ಡಾಲರ್ ನಷ್ಟು ದ್ವಿಪಕ್ಷೀಯ ವ್ಯಾಪಾರವನ್ನು ಹೆಚ್ಚಿಸುತ್ತದೆ.
ಈ ಒಪ್ಪಂದಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರ ಸಮ್ಮುಖದಲ್ಲಿ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಮತ್ತು ಬ್ರಿಟಿಷ್ ವಾಣಿಜ್ಯ ಸಚಿವ ಜೊನಾಥನ್ ರೆನಾಲ್ಡ್ಸ್ ಸಹಿ ಹಾಕಿದರು.