ನವದೆಹಲಿ: ಹಲವು ಎಟಿಎಂ ಕಳ್ಳತನದಲ್ಲಿ ಭಾಗಿಯಾಗಿದ್ದ ಅಂತರರಾಜ್ಯ ಮೇವಾಟಿ ಗ್ಯಾಂಗ್‌ನ ಇಬ್ಬರು ವಾಂಟೆಡ್ ಆರೋಪಿಗಳನ್ನು ದೆಹಲಿ ಪೊಲೀಸರು ಸಿನಿಮೀಯ ಶೈಲಿಯಲ್ಲಿ ಚೇಸ್ ಮಾಡಿ, ಗುಂಡು ಹಾರಿಸಿ ಗುರುವಾರ ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
ಹರಿಯಾಣದ ಮಥುರಾ ಮತ್ತು ಪಲ್ವಾಲ್ ನಿವಾಸಿಗಳಾದ ಸಾಜಿದ್(23) ಮತ್ತು ಆದಿಲ್ (27) ಇಬ್ಬರೂ ಬೈಕ್‌ನಲ್ಲಿ ತೆರಳುತ್ತಿದ್ದಾಗ ಪೊಲೀಸರು ಅವರಿಗೆ ನಿಲ್ಲಿಸುವಂತೆ ಸೂಚಿಸಿದ್ದಾರೆ. ಆದರೆ ಅವರು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ಹೀಗಾಗಿ ಸ್ವಲ್ಪ ಸಮಯ ಬೆನ್ನಟ್ಟಿದ ಪೊಲೀಸರ ಮೇಲೆ ಗುಂಡು ಹಾರಿಸಿದ್ದಾರೆ. ಬಳಿಕ ಪೊಲೀಸರು ಸಹ ಗುಂಡು ಹಾರಿಸಿದ್ದು, ಜೈತ್‌ಪುರ-ಕಾಳಿಂಡಿ ಕುಂಜ್ ಪುಸ್ತಾ ರಸ್ತೆಯ ಬಳಿ ರಾತ್ರಿ 10 ಗಂಟೆ ಸುಮಾರಿಗೆ ಇಬ್ಬರನ್ನೂ ಬಂಧಿಸಲಾಯಿತು ಎಂದು ಪೊಲೀಸ್ ಉಪ ಆಯುಕ್ತ(ವಿಶೇಷ ಸೆಲ್) ಅಮಿತ್ ಕೌಶಿಕ್ ತಿಳಿಸಿದ್ದಾರೆ.
ಎನ್‌ಕೌಂಟರ್‌ನಲ್ಲಿ ಇಬ್ಬರೂ ಗಾಯಗೊಂಡಿದ್ದು, ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಇತ್ತೀಚೆಗೆ ನಡೆದ ಎಟಿಎಂ ಕಳ್ಳತನದಲ್ಲಿ ಲೂಟಿ ಮಾಡಲಾದ ಒಟ್ಟು 48,500 ರೂ., ಎರಡು ಪಿಸ್ತೂಲ್‌ಗಳು, ಜೀವಂತ ಕಾರ್ಟ್ರಿಡ್ಜ್‌ಗಳೊಂದಿಗೆ ದೆಹಲಿಯಿಂದ ಕದ್ದ ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಅಧಿಕಾರಿಯ ಪ್ರಕಾರ, ದೆಹಲಿ ಪೊಲೀಸ್ ವಿಶೇಷ ಘಟಕವು ಕಳೆದ ಆರು ತಿಂಗಳಿನಿಂದ ಸಾಜಿದ್ ಮತ್ತು ಅವನ ಗ್ಯಾಂಗ್ ಅನ್ನು ಪತ್ತೆಹಚ್ಚುತ್ತಿತ್ತು.
ಉತ್ತರ ಪ್ರದೇಶ, ಪಂಜಾಬ್ ಮತ್ತು ದೆಹಲಿ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಹಲವು ಎಟಿಎಂ ಲೂಟಿ ಮತ್ತು ಶಸ್ತ್ರಾಸ್ತ್ರ ಕಳ್ಳಸಾಗಣೆ ಪ್ರಕರಣಗಳಲ್ಲಿ ಈ ಆರೋಪಿಗಳು ಬೇಕಾಗಿದ್ದರು ಎಂದು ಅವರು ತಿಳಿಸಿದ್ದಾರೆ.