ಪುಣೆ: ಪುಣೆ-ಮುಂಬೈ ಎಕ್ಸ್‌ಪ್ರೆಸ್ ವೇನಲ್ಲಿ ನಡೆದ ಭೀಕರ ಸರಣಿ ಅಪಘಾತದಲ್ಲಿ ಓರ್ವ ಮಹಿಳೆ ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದಾರೆ.
ಶನಿವಾರ (ಜು.26) ಸಂಜೆ ವೇಳೆ ಈ ಘಟನೆ ನಡೆದಿದ್ದು, ಎಕ್ಸ್‌ಪ್ರೆಸ್ ವೇನಲ್ಲಿ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಗೆ ಕಾರಣವಾಗಿದೆ. ಪುಣೆ-ಮುಂಬೈ ಎಕ್ಸ್‌ಪ್ರೆಸ್ ವೇನ ಖೋಪಲಿ ಎಕ್ಸಿಟ್ ಬಳಿ ಸರಕು ಸಾಗಾಣಿಕಾ ಕಂಟೈನರ್ ಟ್ರಕ್ಕೊಂದರ ಬ್ರೇಕ್ ಫೇಲ್ ಆದ ಪರಿಣಾಮ ಈ ಅಪಘಾತ ಸಂಭವಿಸಿದೆ.
ಟ್ರಕ್ ಪುಣೆ-ಮುಂಬೈ ಎಕ್ಸ್‌ಪ್ರೆಸ್ ವೇನಲ್ಲಿನ ಸುಮಾರು 25 ವಾಹನಗಳಿಗೆ ಢಿಕ್ಕಿಯಾಗಿದ್ದು, ಹಲವಾರು ವಾಹನಗಳು ಜಖಂಗೊಂಡಿವೆ. ಕಂಟೈನರ್ ಟ್ರಕ್ ನಿಯಂತ್ರಣ ತಪ್ಪಿ ಇತರ ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಈ ಸರಣಿ ಅಪಘಾತ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಘಟನೆಯಲ್ಲಿ ಓರ್ವ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೃತ ಮಹಿಳೆಯನ್ನು ಒಸ್ಮಾನಾಬಾದ್ ನಿವಾಸಿ 35 ವರ್ಷದ ಅನಿತಾ ಏಖಂಡೆ ಎಂದು ಗುರುತಿಸಲಾಗಿದೆ.
ವೇಗವಾಗಿ ಬಂದ ಕಂಟೈನರ್ ಟ್ರಕ್ ನ ಬ್ರೇಕ್ ವೈಫಲ್ಯದಿಂದ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಅಪಘಾತ ಸಂಭವಿಸಿದ ಸ್ವಲ್ಪ ಸಮಯದ ನಂತರ ಅಗ್ನಿಶಾಮಕ ದಳ ಮತ್ತು ಆಂಬ್ಯುಲೆನ್ಸ್ ಸೇವೆಗಳು ಸ್ಥಳಕ್ಕೆ ಧಾವಿಸಿವೆ. ಕೂಡಲೇ ಗಾಯಾಳುಗಳನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗಳಿಗೆ ಕಳುಹಿಸಿದ್ದಾರೆ.
ಅಪಘಾತದಿಂದಾಗಿ ಪುಣೆಯಿಂದ ಮುಂಬೈಗೆ ವಾಹನ ಸಂಚಾರ ಸ್ಥಗಿತಗೊಂಡಿತು. ವಾರಾಂತ್ಯದ ಕಾರಣ ಹೆಚ್ಚಿನ ಸಂಖ್ಯೆಯ ವಾಹನಗಳು ರಸ್ತೆಯಲ್ಲಿದ್ದವು, ಇದು ದಟ್ಟಣೆ ಮತ್ತಷ್ಟು ಹದಗೆಡಲು ಕಾರಣವಾಯಿತು.