ನವದೆಹಲಿ: ಆಪರೇಷನ್ ಸಿಂಧೂರ್ ವೇಳೆಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮ ಒಪ್ಪಂದ ಜಾರಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪಾತ್ರ ಕುರಿತ ವದಂತಿಗಳಿಗೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಸೋಮವಾರ ತೆರೆ ಎಳೆದಿದ್ದಾರೆ.
ಲೋಕಸಭೆಯಲ್ಲಿ ನಡೆಯುತ್ತಿರುವ ಪಹಲ್ಗಾಮ್ ಹಾಗೂ ಆಪರೇಷನ್ ಸಿಂಧೂರ್ ಕುರಿತ 16 ಗಂಟೆಗಳ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಜೈಶಂಕರ್, ಏಪ್ರಿಲ್ 22 ಮತ್ತು ಜೂನ್ 17 ರ ನಡುವೆ ಪ್ರಧಾನಿ ನರೇಂದ್ರ ಮೋದಿ ಮತ್ತು ಟ್ರಂಪ್ ನಡುವೆ ಯಾವುದೇ ದೂರವಾಣಿ ಸಂಭಾಷಣೆ ನಡೆದಿಲ್ಲ ಎಂದು ಸ್ಪಷ್ಪಪಡಿಸಿದರು.
100 ಗಂಟೆಗಳ ಬಳಿಕ ಕದನ ವಿರಾಮ ಒಪ್ಪಂದ ಘೋಷಣೆ:
ಏಪ್ರಿಲ್ 22 ರಂದು ಪಹಲ್ಗಾಮ್ ಉಗ್ರರ ದಾಳಿ ನಡೆದಿತ್ತು. ಇದಕ್ಕೆ ಪ್ರತೀಕಾರವಾಗಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ಶಿಬಿರಗಳನ್ನು ಗುರಿಯಾಗಿಟ್ಟುಕೊಂಡು ಭಾರತ ಆಪರೇಷನ್ ಸಿಂಧೂರ್ ಆರಂಭಿಸಿತ್ತು. ಇದಕ್ಕೆ ಪ್ರತೀಕಾರವಾಗಿ ಭಾರತದ ಮಿಲಿಟರಿ ಮತ್ತು ನಾಗರಿಕ ಕಟ್ಟಡಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಕ್ಷಿಪಣಿ ದಾಳಿ ನಡೆಸಿತು. ಇದಾದ ಸುಮಾರು 100 ಗಂಟೆಗಳ ಬಳಿಕ ಮೇ 10 ರಂದು ಭಾರತ ಮತ್ತು ಪಾಕಿಸ್ತಾನ ಕದನ ವಿರಾಮ ಒಪ್ಪಂದವನ್ನು ಘೋಷಿಸಿದವು.
ಮೇ ತಿಂಗಳಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಣ ತೀವ್ರ ಉದ್ವಿಗ್ನತೆ ನಡುವೆ ಪಾಕಿಸ್ತಾನದ ದಾಳಿ ಬಗ್ಗೆ ಅಮೆರಿಕ ಭಾರತಕ್ಕೆ ಎಚ್ಚರಿಕೆ ನೀಡಿತ್ತು ಎಂದು ಜೈಶಂಕರ್ ಸದನಕ್ಕೆ ವಿವರಿಸಿದರು.
ಪಾಕಿಸ್ತಾನದಿಂದ ಬೃಹತ್ ದಾಳಿಯ ಎಚ್ಚರಿಕೆ ನೀಡಿದ್ದ ಅಮೆರಿಕ:
ಮೇ 9 ರಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರೆ ಮಾಡಿದ ಅಮೆರಿಕದ ಉಪಾಧ್ಯಕ್ಷ ಜೆ. ಡಿ. ವಾನ್ಸ್, ಪಾಕಿಸ್ತಾನದ ಬೃಹತ್ ದಾಳಿ ಕುರಿತು ಎಚ್ಚರಿಕೆ ನೀಡಿದ್ದರು. ಅಂತಹ ದಾಳಿ ನಡೆದರೆ ತಕ್ಕ ತಿರುಗೇಟು ನೀಡುವುದಾಗಿ ಪ್ರಧಾನಿ ಮೋದಿ ಹೇಳಿದ್ದರು. ಆ ದಾಳಿಯನ್ನು ನಮ್ಮ ಸಶಸ್ತ್ರ ಪಡೆಗಳು ವಿಫಲಗೊಳಿಸಿದವು. ಮಾರನೇ ದಿನ ಮೇ 10 ರಂದು ಪಾಕಿಸ್ತಾನ ಕದನ ವಿರಾಮಕ್ಕೆ ಸಿದ್ಧವಾಗಿರುವ ಕುರಿತು ವಿವಿಧ ರಾಷ್ಟ್ರಗಳಿಂದ ಭಾರತಕ್ಕೆ ಕರೆ ಬಂದಿತು. ನಮ್ಮ ನಿಲುವು ಸ್ಪಷ್ಟವಾಗಿತ್ತು. ಈ ವಿಚಾರದಲ್ಲಿ ಪಾಕಿಸ್ತಾನ ಗಂಭೀರವಾಗಿದ್ದರೆ, DGMO ಮೂಲಕ ಮನವಿ ಬರಲಿ ಎಂಬುದಾಗಿತ್ತು. ಅದೇ ರೀತಿ ಪಾಕ್ DGMO ಮೂಲಕ ಕದನ ವಿರಾಮ ಒಪ್ಪಂದಕ್ಕೆ ಕರೆ ಬಂದಿತು ಎಂದು ತಿಳಿಸಿದರು.
ಜೂನ್ 17ರವರೆಗೂ ಟ್ರಂಪ್ ಜೊತೆಗೆ ಯಾವುದೇ ಮಾತುಕತೆ ಇಲ್ಲ:
ಈ ಅವಧಿಯಲ್ಲಿ ವ್ಯಾಪಾರಕ್ಕೆ ಸಂಬಂಧಿಸಿದಂತೆ ಅಮೆರಿಕದೊಂದಿಗೆ ಯಾವುದೇ ಮಾತುಕತೆ ನಡೆದಿಲ್ಲ. ಏಪ್ರಿಲ್ 22 ರಿಂದ ಪ್ರಧಾನಿ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಯಾವುದೇ ಫೋನ್ ಮಾತುಕತೆ ನಡೆದಿಲ್ಲ. ಜೂನ್ 17ರಂದು ಕರೆ ಮಾಡಿ ಪಹಲ್ಗಾಮ್ ದಾಳಿ ಬಗ್ಗೆ ದು:ಖ ವ್ಯಕ್ತಪಡಿಸಿದ್ದಾರೆ. ಕೆನಡಾದಲ್ಲಿ ಪ್ರಧಾನಿ ಮೋದಿ ಜೊತೆಗೆ ಮತ್ತೆ ಮಾತನಾಡಿದ್ದಾರೆ ಎಂದು ಜೈಶಂಕರ್ ತಿಳಿಸಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಗೃಹ ಸಚಿವ ಅಮಿತ್ ಶಾ, ವಿದೇಶಾಂಗ ಸಚಿವರ ಹೇಳಿಕೆಗಿಂತಲೂ ವಿದೇಶದ ನಾಯಕನ ಮಾತನ್ನು ಯಾಕೆ ನಂಬುತ್ತೀರಾ ಎಂದು ವಿಪಕ್ಷಗಳನ್ನು ಕೇಳಿದರು.
ಈ ಮಧ್ಯೆ ಸೋಮವಾರವೂ ಸ್ಕಾಟ್ ಲ್ಯಾಂಡ್ ನಲ್ಲಿ ತನ್ನ ಮಧ್ಯಸ್ಥಿಕೆ ಹೇಳಿಕೆಯನ್ನು ಪುನರುಚ್ಚರಿಸಿರುವ ಡೊನಾಲ್ಡ್ ಟ್ರಂಪ್, ಸಮಯಕ್ಕೆ ಸರಿಯಾಗಿ ಮಧ್ಯ ಪ್ರವೇಶಿಸಿ ಎಲ್ಲಾ ವ್ಯಾಪಾರ ಒಪ್ಪಂದಗಳನ್ನು ರದ್ದುಗೊಳಿಸುವುದಾಗಿ ಬೆದರಿಕೆ ಹಾಕದಿದ್ದರೆ ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧ ನಡೆಯುತಿತ್ತು ಎಂದು ಹೇಳಿದ್ದಾರೆ