ನವದೆಹಲಿ: ಭಾರತದ ಗಡಿಗಳನ್ನು ರಕ್ಷಿಸಲು ಸಶಸ್ತ್ರ ಪಡೆಗಳು ಸದಾ ಜಾಗರೂಕವಾಗಿವೆ ಮತ್ತು ಒಂಬತ್ತು ಭಯೋತ್ಪಾದಕ ತಾಣಗಳ ಮೇಲೆ ಆಪರೇಷನ್ ಸಿಂಧೂರ ಪರಿಣಾಮಕಾರಿ ಮತ್ತು ಸುಸಂಘಟಿತ ದಾಳಿಯಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೋಮವಾರ ಪ್ರತಿಪಾದಿಸಿದರು.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿ ಮತ್ತು ಆಪರೇಷನ್ ಸಿಂಧೂರ ಕುರಿತು ಲೋಕಸಭೆಯಲ್ಲಿ ಚರ್ಚೆಯನ್ನು ಆರಂಭಿಸಿದ ಅವರು, ಪಾಕ್ ಆಕ್ರಮಿಕ ಕಾಶ್ಮೀರ (ಪಿಒಕೆ) ಮತ್ತು ಪಾಕಿಸ್ತಾನದೊಳಗೆ ಉಂಟಾದ ಹಾನಿಯ ಪುರಾವೆಗಳು ಭಾರತದ ಬಳಿ ಇವೆ ಎಂದರು.
ರಾಷ್ಟ್ರಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ವೀರ ಸೈನಿಕರಿಗೆ ನಾನು ನನ್ನ ಗೌರವಗಳನ್ನು ಸಲ್ಲಿಸುತ್ತೇನೆ. ಪಹಲ್ಗಾಮ್ ಉಗ್ರ ದಾಳಿಯ ನಂತರ, ನಮ್ಮ ಸಶಸ್ತ್ರ ಪಡೆಗಳು ಕ್ರಮ ಕೈಗೊಂಡವು ಮತ್ತು 100 ಕ್ಕೂ ಹೆಚ್ಚು ಭಯೋತ್ಪಾದಕರು, ಅವರ ತರಬೇತುದಾರರು ಮತ್ತು ನಿರ್ವಾಹಕರು ತಂಗಿದ್ದ ಒಂಬತ್ತು ಉಗ್ರ ತಾಣಗಳ ಮೇಲೆ ನಿಖರವಾಗಿ ದಾಳಿ ಮಾಡಿದವು.
'ನಮ್ಮ ಸಶಸ್ತ್ರ ಪಡೆಗಳು ನಡೆಸಿದ ಸಂಘಟಿತ ದಾಳಿಗಳು 9 ಭಯೋತ್ಪಾದಕ ನೆಲೆಗಳನ್ನು ನಾಶ ಮಾಡಿದವು. ಈ ಮಿಲಿಟರಿ ಕಾರ್ಯಾಚರಣೆಯಲ್ಲಿ, ನೂರಕ್ಕೂ ಹೆಚ್ಚು ಭಯೋತ್ಪಾದಕರು, ಅವರ ತರಬೇತುದಾರರು, ನಿರ್ವಾಹಕರು ಮತ್ತು ಸಹಚರರು ಕೊಲ್ಲಲ್ಪಟ್ಟರು ಎಂದು ಅಂದಾಜಿಸಲಾಗಿದೆ. ಇವರಲ್ಲಿ ಹೆಚ್ಚಿನವರು ಜೈಶ್-ಎ-ಮೊಹಮ್ಮದ್, ಲಷ್ಕರ್-ಎ-ತೈಬಾ ಮತ್ತು ಹಿಜ್ಬುಲ್ ಮುಜಾಹಿದ್ದೀನ್‌ನಂತಹ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಬಂಧ ಹೊಂದಿದ್ದರು' ಎಂದು ಮಾಹಿತಿ ನೀಡಿದರು.
'ಈ ಮಿಲಿಟರಿ ಕಾರ್ಯಾಚರಣೆಯನ್ನು ಕೇವಲ 22 ನಿಮಿಷಗಳಲ್ಲಿ ತ್ವರಿತವಾಗಿ ಪೂರ್ಣಗೊಳಿಸಲಾಯಿತು ಮತ್ತು ಪಹಲ್ಗಾಮ್‌ನಲ್ಲಿ ನಡೆದ ಹತ್ಯೆಗಳಿಗೆ ಪ್ರತೀಕಾರ ತೀರಿಸಿಕೊಳ್ಳಲಾಯಿತು. ಈ ದಾಳಿಗಳನ್ನು ದೊಡ್ಡ ಸಂಘರ್ಷ ಅಥವಾ ಯುದ್ಧವನ್ನು ಪ್ರಚೋದಿಸುವುದನ್ನು ತಪ್ಪಿಸಲು ಎಚ್ಚರಿಕೆಯಿಂದ ಯೋಜಿಸಲಾಗಿತ್ತು. ಅವುಗಳನ್ನು ಸೀಮಿತ ಪ್ರತಿಕ್ರಿಯೆಯಾಗಿ ಉದ್ದೇಶಿಸಲಾಗಿತ್ತು' ಎಂದು ಹೇಳಿದರು.
'ಆಪರೇಷನ್ ಸಿಂಧೂರವನ್ನು ಕಾರ್ಯಗತಗೊಳಿಸುವ ಮೊದಲು, ನಮ್ಮ ಪಡೆಗಳು ಪ್ರತಿಯೊಂದು ಅಂಶವನ್ನು ಅಧ್ಯಯನ ಮಾಡಿ, ಭಯೋತ್ಪಾದಕರಿಗೆ ಗರಿಷ್ಠ ಹಾನಿಯನ್ನುಂಟುಮಾಡುವ ಆಯ್ಕೆಯನ್ನು ಆರಿಸಿಕೊಂಡವು. ಆದರೆ, ಮುಗ್ಧ ನಾಗರಿಕರಿಗೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳುತ್ತಿದ್ದವು' ಎಂದು ಸಿಂಗ್ ಹೇಳಿದರು.