ನವದೆಹಲಿ: ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸದನದ ನಾಯಕ ಜೆ.ಪಿ. ನಡ್ಡಾ ಅವರು ಆಕ್ಷೇಪಾರ್ಹ ಹೇಳಿಕೆ ನೀಡಿದರು. ಇದು ವಿರೋಧ ಪಕ್ಷದ ಸದಸ್ಯರು ಮತ್ತು ಆಡಳಿತ ಪಕ್ಷದ ಸದಸ್ಯರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು. ತೀವ್ರ ಕೋಲಾಹಲದ ನಂತರ ಕೇಂದ್ರ ಸಚಿವ ಜೆಪಿ ನಡ್ಡಾ ಅವರು ತಮ್ಮ ಹೇಳಿಕೆ ವಾಪಸ್ ಪಡೆದು ಖರ್ಗೆ ಕ್ಷಮೆಯಾಚಿಸಿದರು.
ಆಪರೇಷನ್ ಸಿಂಧೂರ್ ಮತ್ತು ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕುರಿತ ಚರ್ಚೆಯ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಒಂದು ಗಂಟೆಗೂ ಹೆಚ್ಚು ಕಾಲ ಮಾತನಾಡಿದರು. ಈ ವೇಳೆ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನಡ್ಡಾ ಅವರು, ಎದ್ದುನಿಂತು, ಖರ್ಗೆ ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದು ಹೇಳಿಕೆ ನೀಡಿದರು.
ನಡ್ಡಾ ಹೇಳಿಕೆಯಿಂದ ಆಕ್ರೋಶಗೊಂಡ ಪ್ರತಿಪಕ್ಷಗಳು ಖರ್ಗೆಯವರಂಥ ಹಿರಿಯರಿಗೆ ಅಂಥ ಪದ ಬಳಸಬಾರದು. ಕೂಡಲೇ ಅವರು ತಮ್ಮ ಹೇಳಿಕೆ ಹಿಂಪಡೆಯಬೇಕು ಎಂದು ಆಗ್ರಹಿಸಿದರು. ವಿಪಕ್ಷಗಳೆಲ್ಲವೂ ಪಕ್ಷಭೇದ ಮರೆದು ಖರ್ಗೆಯವರ ಬೆಂಬಲಕ್ಕೆ ನಿಂತವು. ಇದರಿಂದ ಎಚ್ಚೆತ್ತ ನಡ್ಡಾ ಅವರು, ನಾನು ಬಳಸಿದ ಪದಗಳನ್ನು ಹಿಂದಕ್ಕೆ ಪಡೆಯುತ್ತೇನೆ. ಮಾತಿನ ಭರದಲ್ಲಿ ಹಾಗೆ ಹೇಳಿದ್ದಷ್ಟೇ. ವೈಯಕ್ತಿಕವಾಗಿ ನಾನು ಖರ್ಗೆಯವರನ್ನು ಗೌರವಿಸುತ್ತೇನೆ. ನನ್ನ ದುಡುಕಿಗಾಗಿ ಖರ್ಗೆಯವರಲ್ಲಿ ನಾನು ಕ್ಷಮೆ ಕೋರುತ್ತೇನೆ ಎಂದು ನಡ್ಡಾ ಹೇಳಿದರು. ಆಗ ವಿವಾದ ತಣ್ಣಗಾಯಿತು.
2015 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅನಿರೀಕ್ಷಿತ ಪಾಕಿಸ್ತಾನ ಭೇಟಿಯನ್ನು ಕಾಂಗ್ರೆಸ್ ಅಧ್ಯಕ್ಷರು ಟೀಕಿಸಿದರು ಮತ್ತು ವಿದೇಶಾಂಗ ನೀತಿಯು 'ಈವೆಂಟ್-ಬಾಜಿ' ಅಲ್ಲ ಎಂದು ಹೇಳಿದರು. ಅಲ್ಲದೆ ಪಾಕಿಸ್ತಾನ ವಿಚಾರದಲ್ಲಿ ಸರ್ಕಾರ ಸರಿಯಾದ ನೀತಿಯನ್ನು ರೂಪಿಸಬೇಕು ಎಂದು ಒತ್ತಾಯಿಸಿದರು.
"ಇಲ್ಲಿ ನಾವು(ಕಾಂಗ್ರೆಸ್) ಪಾಕಿಸ್ತಾನವನ್ನು ಟೀಕಿಸುತ್ತೇವೆ ಮತ್ತು ಅಲ್ಲಿ ನೀವು ಅವರ ದಾವತ್‌ಗೆ ಹೋಗಿ ಅವರನ್ನು ಅಪ್ಪಿಕೊಳ್ಳುತ್ತೀರಿ" ಎಂದು ಖರ್ಗೆ ಅವರು, ಪ್ರಧಾನಿ ಮೋದಿ ಹೆಸರು ಪ್ರಸ್ತಾಪದೆ "ವಿಶ್ವ ಗುರು" ಎಂಬ ಪದ ಬಳಸಿ ಟೀಕಿಸಿದರು.