ನರೇಂದ್ರ ಮೋದಿ 
ದೇಶ

'ದಯವಿಟ್ಟು ನಿಲ್ಲಿಸಿ, ಮತ್ತಷ್ಟು ನಾಶವಾಗಲು ಇಷ್ಟವಿಲ್ಲ': ಕದನ ವಿರಾಮಕ್ಕೆ ಮೊದಲು Pak DGMO ಕರೆ; ರಾಹುಲ್ ಪ್ರಶ್ನೆಗೆ ಮೋದಿ ಸ್ಪಷ್ಟನೆ!

ಸಂಸತ್ತಿನಲ್ಲಿ ಆಪರೇಷನ್ ಸಿಂಧೂರ್ ಕುರಿತು ನಡೆದ ಚರ್ಚೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಜಗತ್ತಿನ ಯಾವುದೇ ನಾಯಕನೂ ಆಪರೇಷನ್ ಸಿಂಧೂರ್ ನಿಲ್ಲಿಸುವಂತೆ ಕೇಳಿಲ್ಲ ಎಂದು ಹೇಳಿದರು.

ನವದೆಹಲಿ: ಸಂಸತ್ತಿನಲ್ಲಿ ಆಪರೇಷನ್ ಸಿಂಧೂರ್ ಕುರಿತು ನಡೆದ ಚರ್ಚೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, 'ಜಗತ್ತಿನ ಯಾವುದೇ ನಾಯಕನೂ ಆಪರೇಷನ್ ಸಿಂಧೂರ್ ನಿಲ್ಲಿಸುವಂತೆ ಕೇಳಿಲ್ಲ. ಬದಲಿಗೆ ಪಾಕಿಸ್ತಾನದ ಡಿಜಿಎಂಒ ನೆರವಾಗಿ ಕರೆ ಮಾಡಿ ದಯವಿಟ್ಟು ನಿಲ್ಲಿಸಿ, ಮತ್ತಷ್ಟು ನಾಶವಾಗಲು ಇಷ್ಟವಿಲ್ಲ ಎಂದು ಮನವಿ ಮಾಡಿದ್ದರಿಂದ ಕದನ ವಿರಾಮ ಪ್ರಕ್ರಿಯೆ ನಡೆದವು ಎಂದು ಲೋಕಸಭೆಗೆ ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಿದರು.

ಪಹಲ್ಗಾಮ್ ಉಗ್ರ ಕೃತ್ಯದ ನಂತರ ಮತ್ತೊಮ್ಮೆ ಪಾಕಿಸ್ತಾನವು ದೊಡ್ಡ ದಾಳಿ ನಡೆಸಲಿದೆ ಎಂದು ಕರೆ ಮಾಡಿದ್ದ ಅಮೆರಿಕದ ಉಪಾಧ್ಯಕ್ಷರು ಹೇಳಿದರು. ಇದು ಪಾಕಿಸ್ತಾನದ ಉದ್ದೇಶವಾಗಿದ್ದರೆ, ಅದು ಅವರಿಗೆ ದುಬಾರಿ ಆಗಲಿದೆ ಎಂಬುದು ನನ್ನ ಉತ್ತರವಾಗಿತ್ತು. ಪಾಕಿಸ್ತಾನಕ್ಕೆ ಅದರದೇ ಭಾಷೆಯಲ್ಲೇ ಉತ್ತರಿಸುತ್ತೇವೆ. ನಾವು ದೊಡ್ಡ ದಾಳಿ ನಡೆಸುವ ಮೂಲಕ ಪ್ರತಿಕ್ರಿಯಿಸುತ್ತೇವೆ. ನಾವು ಗುಂಡುಗಳಿಗೆ ಶೆಲ್‌ಗಳಿಂದ ಪ್ರತಿಕ್ರಿಯಿಸುತ್ತೇವೆ ಎಂದು ನಾನು ಮತ್ತಷ್ಟು ಹೇಳಿದೆ. ಇದು ಸುಮಾರು 9ನೇ ತಾರೀಖಿನ ವಿಷಯ. 9ನೇ ತಾರೀಖಿನ ರಾತ್ರಿ ಮತ್ತು 10ನೇ ತಾರೀಖಿನ ಬೆಳಿಗ್ಗೆ, ನಾವು ಪಾಕಿಸ್ತಾನದ ಮಿಲಿಟರಿ ಶಕ್ತಿಯನ್ನು ನಾಶಪಡಿಸಿದ್ದೇವೆ. ಇದು ನಮ್ಮ ಉತ್ತರ ಮತ್ತು ಇದು ನಮ್ಮ ಉತ್ಸಾಹವಾಗಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಮೇ 9ರ ಮಧ್ಯರಾತ್ರಿ ಮತ್ತು ಮೇ 10ರ ಬೆಳಿಗ್ಗೆ, ನಮ್ಮ ಕ್ಷಿಪಣಿಗಳು ಪಾಕಿಸ್ತಾನದ ಮೂಲೆಗಳನ್ನು ಹೊಡೆದು ಪಾಕಿಸ್ತಾನವನ್ನು ಮೊಣಕಾಲೂರುವಂತೆ ಮಾಡಿತು ಎಂದು ಮೋದಿ ಹೇಳಿದರು. ಪಾಕಿಸ್ತಾನಕ್ಕೆ ಬಲವಾದ ಹೊಡೆತ ಬಿದ್ದಾಗ, ಪಾಕಿಸ್ತಾನ ಡಿಜಿಎಂಒ ಕರೆ ಮಾಡಿ, ಸಾಕು ಸಾಕು ಎಂದು ಬೇಡಿಕೊಂಡರು. ಈಗ ನಮಗೆ ಹೆಚ್ಚಿನ ದಾಳಿಗಳನ್ನು ತಡೆದುಕೊಳ್ಳುವ ಶಕ್ತಿ ಇಲ್ಲ. ದಯವಿಟ್ಟು ದಾಳಿಯನ್ನು ನಿಲ್ಲಿಸಿ ಎಂದು ಬೇಡಿಕೊಂಡರು. ನಾವು ನಮ್ಮ ಗುರಿಯನ್ನು ಸಾಧಿಸಿದ್ದೇವೆ ಎಂದು ಭಾರತ ಮೊದಲ ದಿನವೇ ಹೇಳಿತ್ತು. ನೀವು ಈಗ ಏನಾದರೂ ಮಾಡಿದರೆ, ಅದು ನಿಮಗೆ ತುಂಬಾ ಬೆಲೆ ತೆರಬೇಕಾಗುತ್ತದೆ. ಭಾರತವು ಸ್ಪಷ್ಟ ನೀತಿಯನ್ನು ಹೊಂದಿತ್ತು ಎಂದು ಮೋದಿ ಹೇಳಿದರು.

ಮೇ 10ರಂದು ಆಪರೇಷನ್ ಸಿಂಧೂರ್ ಅಡಿಯಲ್ಲಿ ತೆಗೆದುಕೊಳ್ಳಲಾಗುತ್ತಿರುವ ಕ್ರಮವನ್ನು ನಿಲ್ಲಿಸುವುದಾಗಿ ಭಾರತ ಘೋಷಿಸಿದಾಗ, ವಿಪರ್ಯಾಸ ಎಂದರೆ ಇಲ್ಲಿನ ನಾಯಕರು ಆಪರೇಷನ್ ಸಿಂಧೂರ್ ಬಗ್ಗೆ ಪ್ರಶ್ನೆಗಳನ್ನು ಎತ್ತಿದರು. ಪಾಕಿಸ್ತಾನದ ದುರದ್ದೇಶ ಹರಡುವ ಕೆಲಸವನ್ನು ಇಲ್ಲಿ ಮಾಡಿದರು. ಕೆಲವರು ಸೇನೆ ನೀಡಿದ ಮಾಹಿತಿಗಳ ಬದಲಿಗೆ ಪಾಕಿಸ್ತಾನದ ಸುಳ್ಳು ಪ್ರಚಾರದಲ್ಲಿ ತೊಡಗಿದ್ದರು. ಆದರೆ ಭಾರತದ ನಿಲುವು ಯಾವಾಗಲೂ ಸ್ಪಷ್ಟವಾಗಿತ್ತು ಎಂದು ಮೋದಿ ಹೇಳಿದರು.

ಭಾರತದ ಪ್ರತಿಯೊಂದು ಪ್ರತಿಕ್ರಿಯೆಯೂ ಮೊದಲಿಗಿಂತ ಬಲವಾಗಿದೆ ಎಂದು ಪಾಕಿಸ್ತಾನ ಇಂದು ಚೆನ್ನಾಗಿ ತಿಳಿದುಕೊಂಡಿದೆ. ಭವಿಷ್ಯದಲ್ಲಿ ಅಗತ್ಯವಿದ್ದಲ್ಲಿ ಭಾರತ ಏನು ಬೇಕಾದರೂ ಮಾಡಬಹುದು ಎಂದು ಅದಕ್ಕೆ ತಿಳಿದಿದೆ. ಅದಕ್ಕಾಗಿಯೇ ಆಪರೇಷನ್ ಸಿಂಧೂರ್ ನಿಂತಿಲ್ಲ ಎಂಬುದನ್ನು ಈ ಪ್ರಜಾಪ್ರಭುತ್ವದ ದೇವಾಲಯದಲ್ಲಿ ನಾನು ಮತ್ತೊಮ್ಮೆ ಪುನರಾವರ್ತಿಸಲು ಬಯಸುತ್ತೇನೆ ಎಂದು ಮೋದಿ ಹೇಳಿದರು.

ಪಾಕಿಸ್ತಾನ ಯಾವುದೇ ದುಷ್ಕೃತ್ಯಕ್ಕೆ ಮುಂದಾದರೆ ಅದಕ್ಕೆ ಸೂಕ್ತ ಉತ್ತರ ನೀಡಲಾಗುವುದು. ಇಂದಿನ ಭಾರತವು ಆತ್ಮವಿಶ್ವಾಸದಿಂದ ತುಂಬಿದೆ. ಇಂದಿನ ಭಾರತವು ಸ್ವಾವಲಂಬನೆಯ ಮಂತ್ರದೊಂದಿಗೆ ಪೂರ್ಣ ಶಕ್ತಿಯೊಂದಿಗೆ ವೇಗವಾಗಿ ಮುನ್ನಡೆಯುತ್ತಿದೆ. ಭಾರತವು ಸ್ವಾವಲಂಬಿಯಾಗುತ್ತಿದೆ ಎಂದು ದೇಶವು ನೋಡುತ್ತಿದೆ. ಆದರೆ ಒಂದೆಡೆ ಭಾರತ ಸ್ವಾವಲಂಬಿಯಾಗುತ್ತಿದೆ ಆದರೆ ಕಾಂಗ್ರೆಸ್ ಸಮಸ್ಯೆಗಳಿಗೆ ಪಾಕಿಸ್ತಾನವನ್ನು ಅವಲಂಬಿಸಿದೆ ಎಂಬುದನ್ನು ಈ ದೇಶವು ನೋಡುತ್ತಿದೆ ಎಂದರು.

ಲೋಕಸಭೆಯಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ನನ್ನ ಮಧ್ಯಸ್ಥಿಕೆಯಿಂದಲೇ ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 29 ಬಾರಿ ಹೇಳಿದ್ದಾರೆ. ಸರಿ, ಅವರು ಸುಳ್ಳು ಹೇಳುತ್ತಿದ್ದರೆ, ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಇದನ್ನು ಸ್ಪಷ್ಟಪಡಿಸಲಿ ಎಂದು ರಾಹುಲ್​ ಗಾಂಧಿ ಒತ್ತಾಯಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Madhya Pradesh: ದುರ್ಗಾದೇವಿ ಮೂರ್ತಿ ವಿಸರ್ಜನೆ ವೇಳೆ ದುರಂತ, ಮಹಿಳೆಯರು, ಮಕ್ಕಳು ಸೇರಿದಂತೆ 14 ಮಂದಿ ಸಾವು!Video

ಈ ಬಾರಿ 'ಮೈಸೂರು ದಸರಾ' ಯಶಸ್ವಿ; ಬೆಳೆ ಹಾನಿಯಾದ ಎಲ್ಲ 10 ಲಕ್ಷ ಹೆಕ್ಟೇರ್ ಗೂ ಸಮೀಕ್ಷೆ ನಂತರ ಪರಿಹಾರ: ಸಿಎಂ ಸಿದ್ದರಾಮಯ್ಯ

'RSS ನಲ್ಲಿ ಒಬ್ಬ ವ್ಯಕ್ತಿಯೂ ಇಲ್ಲ': ಪ್ರಧಾನಿ ಮೋದಿ ಹೇಳಿಕೆಗೆ ಓವೈಸಿ ತಿರುಗೇಟು!

2026 T20 World Cup: ಅರ್ಹತೆ ಪಡೆದ ನಮೀಬಿಯಾ, ಜಿಂಬಾಬ್ವೆ!

ಅಂಬೇಡ್ಕರ್ ಸಿದ್ಧಾಂತದಂತೆ ಬದುಕಿದ್ದೇವೆ; RSS ಕಾರ್ಯಕ್ರಮಕ್ಕೆ ಹೋಗಲ್ಲ: CJI ಗವಾಯಿ ತಾಯಿ ಪತ್ರ

SCROLL FOR NEXT