ಶಿಲ್ಲಾಂಗ್: ಮೇಘಾಲಯದ ಏಕೈಕ ಕಾಂಗ್ರೆಸ್ ಶಾಸಕ ರೋನಿ ವಿ ಲಿಂಗ್ಡೋ ಅವರು ಬುಧವಾರ ಆಡಳಿತಾರೂಢ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ಸೇರಿದರು.
ವಿರೋಧ ಪಕ್ಷದ ಮುಖ್ಯ ಸಚೇತಕರಾಗಿ ಸೇವೆ ಸಲ್ಲಿಸಿದ್ದ ಲಿಂಗ್ಡೋ ಅವರು ಮೈಲ್ಲಿಯಂ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದರು.
ರೋನಿ ಲಿಂಗ್ಡೋ ಅವರು ಉಪಮುಖ್ಯಮಂತ್ರಿ ಸ್ನಿಯವ್‌ಭಲಾಂಗ್ ಧಾರ್ ಸೇರಿದಂತೆ ಹಿರಿಯ ಎನ್‌ಪಿಪಿ ನಾಯಕರ ಸಮ್ಮುಖದಲ್ಲಿ ಇಂದು ವಿಧಾನಸಭಾ ಸ್ಪೀಕರ್ ಥಾಮಸ್ ಎ ಸಂಗ್ಮಾ ಅವರಿಗೆ ವಿಲೀನ ಪತ್ರ ಸಲ್ಲಿಸಿದರು.
"ಅವರ ಪತ್ರವನ್ನು ಪರಿಶೀಲಿಸಿದ ನಂತರ, ಅದು ಕ್ರಮಬದ್ಧವಾಗಿದೆ. ಆದ್ದರಿಂದ, ಇಂದಿನಿಂದ, ಅವರನ್ನು ಸದನದಲ್ಲಿ ಎನ್‌ಪಿಪಿಯ ಶಾಸಕರಾಗಿ ಗುರುತಿಸಲಾಗುತ್ತದೆ" ಎಂದು ಸ್ಪೀಕರ್ ಹೇಳಿದರು.
"ಲಿಂಗ್ಡೋ ಇಂದು ಔಪಚಾರಿಕವಾಗಿ ಎನ್‌ಪಿಪಿಗೆ ಸೇರಿದ್ದಾರೆ" ಎಂದು ಧಾರ್ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಐದು ಸ್ಥಾನಗಳನ್ನು ಗೆದ್ದಿತ್ತು. ಅವರಲ್ಲಿ ಒಬ್ಬರಾದ ಸಲೆಂಗ್ ಎ ಸಂಗ್ಮಾ 2024 ರಲ್ಲಿ ತುರಾ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸದ್ದರು. ನಂತರ ಇತರ ಮೂವರು ಎನ್‌ಪಿಪಿ ಸೇರಿದ್ದರು.