ಡೆಹ್ರಾಡೂನ್: ಇದೇ ಮೊದಲ ಬಾರಿಗೆ ಆಗಸ್ಟ್ 1 ರಿಂದ ಜಾರಿಗೆ ಬರುವಂತೆ 'ಗಿರಿಧಾಮಗಳ ರಾಣಿ' ಮಸ್ಸೂರಿಗೆ ಭೇಟಿ ನೀಡುವ ಎಲ್ಲಾ ಪ್ರವಾಸಿಗರಿಗೆ ಆನ್‌ಲೈನ್ ನೋಂದಣಿ ಕಡ್ಡಾಯಗೊಳಿಸಲು ಉತ್ತರಾಖಂಡ ಸರ್ಕಾರ ಸಜ್ಜಾಗಿದೆ.
ಉತ್ತರಾಖಂಡ ಪ್ರವಾಸೋದ್ಯಮ ಇಲಾಖೆ ಘೋಷಿಸಿದ ಈ ಉಪ ಕ್ರಮವು, ಹೆಚ್ಚುತ್ತಿರುವ ಪ್ರವಾಸಿಗರ ಒಳಹರಿವನ್ನು ಉತ್ತಮವಾಗಿ ನಿರ್ವಹಿಸುವುದು ಮತ್ತು ತೀವ್ರ ಸಂಚಾರ ದಟ್ಟಣೆಯನ್ನು ನಿವಾರಿಸುವ ಗುರಿ ಹೊಂದಿದೆ.
ಹೊಸ ನಿಯಮಗಳ ಅಡಿಯಲ್ಲಿ, ಮಸ್ಸೂರಿಗೆ ಭೇಟಿ ನೀಡುವ ಪ್ರವಾಸಿಗರು ತಮ್ಮ ಆಗಮನದ ಮೊದಲು ತಮ್ಮ ಆಧಾರ್ ಕಾರ್ಡ್ ಬಳಸಿ ಪ್ರವಾಸೋದ್ಯಮ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕಾಗುತ್ತದೆ.
ಅಧಿಕೃತ ಮೂಲಗಳ ಪ್ರಕಾರ, ಜನಪ್ರಿಯ ತಾಣಗಳಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚು ರಚನಾತ್ಮಕ ಕ್ರಮಕ್ಕೆ ಒತ್ತಾಯಿಸುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ(NGT) ನಿರ್ದೇಶನಗಳಿಗೆ ಪ್ರತಿಕ್ರಿಯೆಯಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
"ಈ ವ್ಯವಸ್ಥೆಯು ಪ್ರವಾಸಿಗರು ಮಸ್ಸೂರಿಗೆ ಭೇಟಿ ನೀಡುವುದನ್ನು ತಡೆಯುವ ಉದ್ದೇಶ ಹೊಂದಿಲ್ಲ" ಎಂದು ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಧೀರಜ್ ಗಾರ್ಬ್ಯಾಲ್ ಅವರು ಹೇಳಿದ್ದಾರೆ. "ಬದಲಾಗಿ, ಇದು ಹೆಚ್ಚು ಸಂಘಟಿತ ಮತ್ತು ಸುಸ್ಥಿರ ಪ್ರವಾಸೋದ್ಯಮವನ್ನು ಉತ್ತೇಜಿಸುವತ್ತ ಒಂದು ಹೆಜ್ಜೆಯಾಗಿದೆ." ಭವಿಷ್ಯದಲ್ಲಿ ರಾಜ್ಯದ ಇತರ ಹೆಚ್ಚಿನ ಒತ್ತಡದ ಗಿರಿಧಾಮಗಳಲ್ಲಿ ಈ ನೋಂದಣಿ ಮಾದರಿಯನ್ನು ಜಾರಿಗೆ ತರಬಹುದು ಎಂದು ಅವರು ತಿಳಿಸಿದ್ದಾರೆ.