ನವದೆಹಲಿ: ಮಾಲೆಗಾಂವ್ ಸ್ಫೋಟ ಪ್ರಕರಣದ ಏಳು ಆರೋಪಿಗಳನ್ನು ಖುಲಾಸೆಗೊಳಿಸಿದ್ದು, ಇದಕ್ಕೆ ಹಿಂದೂ ಭಯೋತ್ಪಾದನೆಯ ಬಣ್ಣ ಕಟ್ಟಲು ಪ್ರಯತ್ನಿಸಿದ ಸೋನಿಯಾ ಮತ್ತು ರಾಹುಲ್ ಗಾಂಧಿ ದೇಶದ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಗುರುವಾರ ಒತ್ತಾಯಿಸಿದೆ.
ಆರೋಪದಿಂದ ಮುಕ್ತಗೊಂಡಿರುವ ಬಿಜೆಪಿಯ ಮಾಜಿ ಸಂಸದೆ ಪ್ರಜ್ಞಾಸಿಂಗ್ ಠಾಕೂರ್ ಮತ್ತು ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ ಅವರಿಗೆ ಪರಿಹಾರ ನೀಡಬೇಕು ಮತ್ತು ಅವರ ವರ್ಚಸ್ಸಿಗೆ ಧಕ್ಕೆ ತರುವಂತಹ ಸಾಕ್ಷ್ಯದ ಸಂಚಿನ ಆರೋಪಕ್ಕಾಗಿ ಪ್ರಾಸಿಕ್ಯೂಷನ್ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್ ಆಗ್ರಹಿಸಿದ್ದಾರೆ.
ಕಾಂಗ್ರೆಸ್ ತನ್ನ ಮತಬ್ಯಾಂಕ್ ಭದ್ರಪಡಿಸಿಕೊಳ್ಳಲು ಯಾವ ಹಂತಕ್ಕೂ ಹೋಗಬಹುದು. ಈ ಪ್ರಕರಣ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಕಾಂಗ್ರೆಕ್ ಮಾಡಿರುವ ಸಂಚು ಆಗಿದೆ. ಹಿಂದೂ ಭಯೋತ್ಪಾದಕ ಸಂಘಟನೆ, ಕೇಸರಿ ಭಯೋತ್ಪಾದನೆಯ ಸಾಧ್ಯತೆ ಎಂದು ಬಣ್ಣ ಕಟ್ಟುವ ಕಾಂಗ್ರೆಸ್ ಪ್ರಯತ್ನವು ನೆಲಕಚ್ಚಿದೆ ಎಂದು ಪ್ರಸಾದ್ ಟೀಕಿಸಿದ್ದಾರೆ.
ವಿಕಿಲೀಕ್ಸ್ ಪ್ರಕಾರ, ಹಿಂದೂ ಪರ ಗುಂಪುಗಳು ಭಯೋತ್ಪಾದಕ ಸಂಘಟನೆ ಎಲ್ಇಟಿಗಿಂತ ಹೆಚ್ಚು ಅಪಾಯಕಾರಿ ಎಂದು 2010 ರಲ್ಲಿ ಯುಎಸ್ ರಾಯಭಾರಿಗೆ ಗಾಂಧಿ ಹೇಳಿದ್ದರು ಎನ್ನಲಾಗಿದೆ. ಕಾಂಗ್ರೆಸ್ ನಾಯಕರ ಹೇಳಿಕೆಗೆ ಚ್ಯುತಿ ಬಂದಿದ್ದು, ಅವರೇ ಸತ್ಯದಿಂದ ದೂರ ಓಡುತ್ತಿದ್ದಾರೆ. ಮಾಜಿ ಕಾಂಗ್ರೆಸ್ ಅಧ್ಯಕ್ಷರಾದ ಗಾಂಧಿ ಮತ್ತು ಅವರ ತಾಯಿ ಸೋನಿಯಾ ಗಾಂಧಿ ಅವರು ದೇಶದ ಕ್ಷಮೆಯಾಚಿಸಬೇಕು ಎಂದು ರವಿಶಂಕರ್ ಪ್ರಸಾದ್ ಆಗ್ರಹಿಸಿದ್ದಾರೆ.
ಸುಮಾರು 17 ವರ್ಷಗಳ ನಂತರ ಮಾಲೆಗಾಂವ್ ಸ್ಫೋಟ ಪ್ರಕರಣದ ಎಲ್ಲಾ ಏಳು ಆರೋಪಿಗಳನ್ನು ಮುಂಬೈನ ವಿಶೇಷ ನ್ಯಾಯಾಲಯ ಖುಲಾಸೆಗೊಳಿಸಿದೆ.