ಬ್ರೆಜಿಲ್: ಪಾಕಿಸ್ತಾನದ ಗಡಿಯಾಚೆಗಿನ ಭಯೋತ್ಪಾದನೆಯನ್ನು ಖಂಡಿಸಿರುವ ಬ್ರೆಜಿಲ್ ನಾಯಕರು ಭಾರತದ ಭಯೋತ್ಪಾದನಾ ನಿಗ್ರಹ ಪ್ರಯತ್ನ ಆಪರೇಷನ್ ಸಿಂಧೂರಕ್ಕೆ ಸ್ಪಷ್ಟ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ನೇತೃತ್ವದ ಸರ್ವಪಕ್ಷ ನಿಯೋಗದ ಸದಸ್ಯರಾಗಿರುವ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.
ನಿಯೋಗವು ಬ್ರೆಜಿಲ್ ಸಂಸತ್ತಿನ ಅಧ್ಯಕ್ಷರು, ಹಂಗಾಮಿ ವಿದೇಶಾಂಗ ಸಚಿವರು ಮತ್ತು ಭಾರತ-ಬ್ರೆಜಿಲ್ ಸ್ನೇಹ ಸಮೂಹದ ಸಂಸತ್ ಸದಸ್ಯರನ್ನು ಭೇಟಿಯಾಯಿತು. ಬಹುಕಾಲದಿಂದ ಬ್ರೆಜಿಲ್ ಭಾರತದ ಜೊತೆ ಮೈತ್ರಿ ಹೊಂದಿದ್ದು, ಮಿತ್ರ ದೇಶವಾಗಿದೆ ಎಂದು ನಿಯೋಗಕ್ಕೆ ಬ್ರೆಜಿಲ್ ನಾಯಕರು ಭರವಸೆ ನೀಡಿದರು ಎಂದು ಸೂರ್ಯ ತಿಳಿಸಿದ್ದಾರೆ.
ನಾವು ಬ್ರೆಜಿಲ್‌ನ ಹಂಗಾಮಿ ವಿದೇಶಾಂಗ ಸಚಿವ, ಬ್ರೆಜಿಲ್ ಸಂಸತ್ತಿನ ಅಧ್ಯಕ್ಷರು, ಭಾರತ-ಬ್ರೆಜಿಲ್ ಸ್ನೇಹ ಸಮೂಹದ ಸಂಸದರನ್ನು ಭೇಟಿಯಾದೆವು. ಮೂರು ಸಭೆಗಳಲ್ಲಿಯೂ, ಬ್ರೆಜಿಲ್ ಭಾರತಕ್ಕೆ ಸ್ಪಷ್ಟವಾಗಿ ಬೆಂಬಲ ವ್ಯಕ್ತಪಡಿಸಿದೆ. ಪಾಕಿಸ್ತಾನದ ಗಡಿಯಾಚೆಗಿನ ಭಯೋತ್ಪಾದನೆಯನ್ನು ಖಂಡಿಸಿದೆ. ಭಾರತದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ಸಿಂಧೂರ್ ಬೆಂಬಲಿಸಿದೆ. ಇದು ಭಾರತಕ್ಕೆ ಬಹಳ ದೊಡ್ಡ ಯಶಸ್ಸು. ಲ್ಯಾಟಿನ್ ಅಮೆರಿಕ ಮತ್ತು ಈ ಸಂಪೂರ್ಣ ಭೌಗೋಳಿಕತೆಯಲ್ಲಿ ಬ್ರೆಜಿಲ್ ಅತ್ಯಗತ್ಯ ಧ್ವನಿಯಾಗಿದೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.
ಜಿ -20, ಜಿ -4, ಬ್ರಿಕ್ಸ್, ಅಥವಾ ಅಂತರರಾಷ್ಟ್ರೀಯ ಸೌರ ಒಕ್ಕೂಟ, ಜೈವಿಕ ಇಂಧನಗಳಿಗಾಗಿ ಇರುವ ಜಾಗತಿಕ ಒಕ್ಕೂಟ ಸೇರಿ ಹಲವೆಡೆ ಬ್ರೆಜಿಲ್ ಭಾರತದ ಜೊತೆ ಕಾರ್ಯತಂತ್ರದ ಪಾಲುದಾರ ರಾಷ್ಟ್ರವಾಗಿದ್ದು. ಮೂರು ಸಭೆಗಳಲ್ಲಿ, ಬ್ರೆಜಿಲ್ ಭಯೋತ್ಪಾದನೆಯ ವಿರುದ್ಧ ಭಾರತದ ನಿಲುವನ್ನು ಬೆಂಬಲಿಸಿದೆ. ಪ್ರತಿ ಸಭೆಯ ಕೊನೆಯಲ್ಲಿ, ಬ್ರೆಜಿಲ್ ಎಲ್ಲಾ ಕಾಲಕ್ಕೂ ಭಾರತದ ಮಿತ್ರ ಎಂಬ ಭರವಸೆ ನೀಡಲಾಯಿತು ಎಂದಿದ್ದಾರೆ.