ಶಿಮ್ಲಾ: ತಮ್ಮ ಪುತ್ರಿ ಪ್ರಿಯಾಂಕಾ ಗಾಂಧಿ ಅವರೊಂದಿಗೆ ಶಿಮ್ಲಾ ಪ್ರವಾಸದಲ್ಲಿರುವ ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರ ಆರೋಗ್ಯದಲ್ಲಿ ಶನಿವಾರ ಏರುಪೇರಾಗಿದ್ದು, ಶಿಮ್ಲಾ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಗಾದರು.
ಸೋನಿಯಾ ಗಾಂಧಿ ಅವರಿಗೆ ಅಧಿಕ ರಕ್ತದೊತ್ತಡ ಹಾಗೂ ಇತರ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಉಂಟಾಗಿದ್ದು, ಅವರನ್ನು ಇಂದು ಶಿಮ್ಲಾದ ಇಂದಿರಾ ಗಾಂಧಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು ಎಂದು ಪಕ್ಷದ ಮುಖಂಡರೊಬ್ಬರು ತಿಳಿಸಿದ್ದಾರೆ.
78 ವರ್ಷದ ಸೋನಿಯಾ ಗಾಂಧಿ ಅವರಿಗೆ ಆಸ್ಪತ್ರೆಯಲ್ಲಿ ಕೆಲವು ಪರೀಕ್ಷೆಗಳನ್ನು ಮಾಡಿದ ನಂತರ ಅವರು ತೆರಳಿದರು ಎಂದು ಇಂದಿರಾ ಗಾಂಧಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಉಪ ವೈದ್ಯಕೀಯ ಅಧೀಕ್ಷಕ ಡಾ. ಅಮನ್ ಅವರು ಹೇಳಿದ್ದಾರೆ.
ಅವರ ರಕ್ತದೊತ್ತಡ ಹೆಚ್ಚಾಗಿತ್ತು. ಆದರೆ ಎಲ್ಲವೂ ಸಾಮಾನ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.
"ಸೋನಿಯಾ ಗಾಂಧಿ ಅವರ ರಕ್ತದೊತ್ತಡ ಸ್ವಲ್ಪ ಹೆಚ್ಚಾಗಿತ್ತು. ಹೀಗಾಗಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇದು ನಿಯಮಿತ ತಪಾಸಣೆಯಾಗಿತ್ತು ಮತ್ತು ಅವರು ಈಗ ಮನೆಗೆ ಮರಳಿದ್ದಾರೆ" ಎಂದು ಹಿಮಾಚಲ ಪ್ರದೇಶ ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರ ನರೇಶ್ ಚೌಹಾಣ್ ಅವರು ಪಿಟಿಐಗೆ ತಿಳಿಸಿದ್ದಾರೆ.
ಮಾಜಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕಳೆದ ಸೋಮವಾರ ತಮ್ಮ ಪುತ್ರಿ ಪ್ರಿಯಾಂಕಾ ಅವರೊಂದಿಗೆ ಶಿಮ್ಲಾ ಆಗಮಿಸಿದ್ದರು. ಶಿಮ್ಲಾದ ಹೊರವಲಯದ ಛರಾಬ್ರಾದಲ್ಲಿರುವ ಪ್ರಿಯಾಂಕಾ ಗಾಂಧಿ ಅವರ ಮನೆಯಲ್ಲಿ ಸೋನಿಯಾ ತಂಗಿದ್ದಾರೆ.