ಮಥುರಾ: ಮಥುರಾ ಜಿಲ್ಲೆಯ ಬರ್ಸಾನಾ ರಸ್ತೆಯಲ್ಲಿನ ಈದ್ಗಾ ಮೈದಾನವೊಂದರ ಬಳಿ ಖಾಲಿ ಜಾಗದಲ್ಲಿ ಮಾಂಸದ ತುಂಡುಗಳು ಕಂಡುಬಂದ ನಂತರ ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿರುವುದಾಗಿ ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಶನಿವಾರ ರಾತ್ರಿ ಗೋವರ್ಧನ್ ಪ್ರದೇಶದ ಈದ್ಗಾ ಮೈದಾನದಲ್ಲಿ ಮಾಂಸದ ತುಂಡುಗಳು ಪತ್ತೆಯಾಗಿವೆ. ಇದು ದನದ ಮಾಂಸದ ತುಂಡುಗಳು ಎಂದು ಸ್ಥಳೀಯರು ಆರೋಪಿಸಿದ ನಂತರ ಸ್ಥಳಕ್ಕಾಗಿಮಿಸಿದ ಹಿಂದೂಪರ ಸಂಘಟನೆಗಳ ಸದಸ್ಯರು ಪ್ರತಿಭಟನೆ ನಡೆಸಿದ್ದಾಗಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮತ್ತೊಂದು ಘಟನೆಯಲ್ಲಿ ಜಿಲ್ಲೆಯ ಮಂಟ್ ಪ್ರದೇಶ ಬಳಿ ಯುಮುನಾ ಎಕ್ಸ್ ಪ್ರೆಸ್ ವೇ ನ ಸರ್ವೀಸ್ ರಸ್ತೆಯಲ್ಲಿ ಸುಟ್ಟ ಗೋವಿನ ಕಳೇಬರವನ್ನು ವಶಕ್ಕೆ ಪಡೆಯಲಾಗಿದ್ದು, ಹಿಂದೂ ಪರ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಬರ್ಸಾನಾ ರಸ್ತೆಯಲ್ಲಿನ ಘಟನೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಗೋ ಹತ್ಯೆ ನಿಷೇಧ ಕಾಯ್ದೆಯ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ 24 ಮಂದಿ ಹಾಗೂ 50 ಅಪರಿಚಿತ ವ್ಯಕ್ತಿಗಳ ವಿರುದ್ಧ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ. ಸ್ಥಳೀಯರು ದನದ ಮಾಂಸದ ತುಂಡುಗಳು ಎಂದು ಆರೋಪಿಸಿದ್ದು, ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಸ್ಯಾಂಪಲ್ ಕಳುಹಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಶ್ಲೋಕ್ ಕುಮಾರ್ ತಿಳಿಸಿದ್ದಾರೆ.
ಶನಿವಾರ ಸಂಜೆ ಈದ್ಗಾ ಮೈದಾನದ ಬಳಿ ಮಾಂಸದ ತುಂಡುಗಳು ಪತ್ತೆಯಾದ ನಂತರ ಗೋ ರಕ್ಷಕ ದಳ ಹಾಗೂ ಕೆಲ ಹಿಂದೂಪರ ಸಂಘಟನೆಗಳು ಸ್ಥಳದಲ್ಲಿ ಜಮಾಯಿಸಿ, ಪ್ರತಿಭಟನೆ ನಡೆಸಿರುವುದಾಗಿ ಕುಮಾರ್ ಹೇಳಿದರು.