ಗ್ಯಾಂಗ್‌ಟಾಕ್: ಈ ತಿಂಗಳ ಆರಂಭದಲ್ಲಿ ಉತ್ತರ ಸಿಕ್ಕಿಂನ ಚಾಟೆನ್‌ನ ಸೇನಾ ಶಿಬಿರದಲ್ಲಿ ಭೂಕುಸಿತ ಸಂಭವಿಸಿದ ನಂತರ ನಾಪತ್ತೆಯಾಗಿದ್ದ ಆರು ಸೇನಾ ಸಿಬ್ಬಂದಿಯ ಪೈಕಿ ಒಬ್ಬ ಸಿಬ್ಬಂದಿಯ ಮೃತದೇಹವನ್ನು ಸೋಮವಾರ ಮಂಗನ್ ಜಿಲ್ಲೆಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹುತಾತ್ಮ ಯೋಧನನ್ನು ಸೈನುದ್ಧೀನ್ ಪಿಕೆ ಎಂದು ಗುರುತಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕಾಣೆಯಾದ ಇತರ ಸೇನಾ ಸಿಬ್ಬಂದಿಯನ್ನು ಪತ್ತೆಹಚ್ಚಲು ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಮಂಗನ್ ಪೊಲೀಸ್ ವರಿಷ್ಠಾಧಿಕಾರಿ(ಎಸ್‌ಪಿ) ಸೋನಮ್ ಡೆಟ್ಚು ಭುಟಿಯಾ ಅವರು ತಿಳಿಸಿದ್ದಾರೆ.
"ಜೂನ್ 1 ರಂದು ಚಾಟೆನ್‌ನಲ್ಲಿರುವ ಸೇನಾ ಶಿಬಿರದಲ್ಲಿ ಸಂಭವಿಸಿದ ಭೂಕುಸಿತದ ನಂತರ ಕಾಣೆಯಾದ ಆರು ಸಿಬ್ಬಂದಿಗಳಲ್ಲಿ ಒಬ್ಬರಾದ ಸೇನಾ ಸಿಬ್ಬಂದಿ ಸೈನುಧೀನ್ ಪಿಕೆ ಅವರ ಮೃತದೇಹವನ್ನು ರಕ್ಷಣಾ ತಂಡಗಳು ವಶಪಡಿಸಿಕೊಂಡಿವೆ" ಎಂದು ಎಸ್‌ಪಿ ಹೇಳಿದ್ದಾರೆ.
ಕಾಣೆಯಾದವರ ಹೊರತಾಗಿ, ಮೂವರು ಸೇನಾ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದು, ಇತರ ನಾಲ್ವರು ಭೂಕುಸಿತದಲ್ಲಿ ಗಾಯಗೊಂಡಿದ್ದಾರೆ.
ಭಾರೀ ಮಳೆಯಿಂದ ಉತ್ತರ ಸಿಕ್ಕಿಂನಲ್ಲಿ ಹಲವಾರು ಭೂಕುಸಿತಗಳು ಸಂಭವಿಸಿದ್ದು, ರಸ್ತೆ ಮತ್ತು ದೂರಸಂಪರ್ಕ ಸಂಪರ್ಕ ಕಡಿತ ಸೇರಿದಂತೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.