ಮೆಹ್ಸಾನಾ (ಗುಜರಾತ್): ಗುರುವಾರ ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ 241 ಜನರ ಪೈಕಿ ಓರ್ವ ಯುವತಿ ಉನ್ನತ ಶಿಕ್ಷಣಕ್ಕಾಗಿ ಲಂಡನ್‌ಗೆ ತೆರಳುತ್ತಿದ್ದಳು ಎಂದು ತಿಳಿದುಬಂದಿದೆ.
ಸಂತ್ರಸ್ತೆಯ ಸಂಬಂಧಿ ಸುರೇಶ್ ಖತಿಕ್, ಲಂಡನ್‌ನಲ್ಲಿ ಆಕೆಯ ಶಿಕ್ಷಣಕ್ಕಾಗಿ ಕುಟುಂಬವು ಸಾಲ ಮಾಡಿತ್ತು ಎಂದು ಹೇಳಿದರು.
'ಕಾಲೇಜು ಮುಗಿದ ನಂತರ, ಆಕೆ ಲಂಡನ್‌ನಲ್ಲಿ ಓದಲು ಬಯಸಿದ್ದಳು. ಅಲ್ಲಿ ಅವಳ ಶಿಕ್ಷಣವನ್ನು ಬೆಂಬಲಿಸಲು ನಾವು ಸಾಲ ಮಾಡಿದ್ದೆವು... ನನ್ನ ಡಿಎನ್‌ಎ ಮಾದರಿಯನ್ನು ತೆಗೆದುಕೊಳ್ಳಲಾಗಿದೆ' ಎಂದು ಖಾಟಿಕ್ ಮಾಧ್ಯಮಗಳಿಗೆ ತಿಳಿಸಿದರು.
ಮತ್ತೊಬ್ಬ ಸಂತ್ರಸ್ತ ಸಂಖೇತ್ ಗೋಸ್ವಾಮಿ ಎಂಬುವವರು ಕೂಡ ಉನ್ನತ ಶಿಕ್ಷಣ ಪಡೆಯಲು ಲಂಡನ್‌ಗೆ ತೆರಳುತ್ತಿದ್ದರು. ಅಹಮದಾಬಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ ಕೂಡಲೇ ಹತ್ತಿರದ ಮೇಘಾನಿನಗರದಲ್ಲಿರುವ ವೈದ್ಯಕೀಯ ಕಾಲೇಜು ಸಂಕೀರ್ಣಕ್ಕೆ ಅಪ್ಪಳಿಸಿದ ಎಐ-171 ವಿಮಾನದಲ್ಲಿದ್ದರು.
ಮೆಹ್ಸಾನಾ ನಿವಾಸಿಗಳಾದ ಸಂತ್ರಸ್ತನ ಕುಟುಂಬವು, ಉನ್ನತ ವ್ಯಾಸಂಗಕ್ಕಾಗಿ ಲಂಡನ್‌ಗೆ ಪ್ರಯಾಣಿಸುತ್ತಿದ್ದರು ಎಂದಿದೆ.
'ನನ್ನ ಸೋದರಳಿಯ ತನ್ನ ಏಕೈಕ ಪುತ್ರ ಸಂಕೇತ್ ಗೋಸ್ವಾಮಿಯನ್ನು ಕಳೆದುಕೊಂಡಿದ್ದಾನೆ. ಆತ ಉನ್ನತ ವ್ಯಾಸಂಗಕ್ಕಾಗಿ ಲಂಡನ್‌ಗೆ ಹೋಗುತ್ತಿದ್ದನು. ಆತ ಉತ್ಸಾಹಿ ಹುಡುಗ. ಆತನಿಗೆ ತಂಗಿ ಇದ್ದಾಳೆ' ಎಂದು ಅವರ ಸಂಬಂಧಿ ಹೇಳಿದರು.
ಲಂಡನ್‌ನ ಗ್ಯಾಟ್ವಿಕ್‌ಗೆ ತೆರಳುತ್ತಿದ್ದ AI-171 ಬೋಯಿಂಗ್ ಡ್ರೀಮ್‌ಲೈನರ್ 787-8 ವಿಮಾನವು ಗುರುವಾರ ಅಹಮದಾಬಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ ಸ್ವಲ್ಪ ಸಮಯದ ನಂತರ ಅಪಘಾತಕ್ಕೀಡಾಗಿತ್ತು. ವಿಮಾನದಲ್ಲಿದ್ದ 242 ಜನರಲ್ಲಿ ಒಬ್ಬರು ಮಾತ್ರ ಬದುಕುಳಿದಿದ್ದಾರೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿವೆ.
8,200 ಗಂಟೆಗಳ ಹಾರಾಟದ ಅನುಭವ ಹೊಂದಿರುವ ಲೈನ್ ತರಬೇತಿ ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಅವರು ಪೈಲಟ್ ಆಗಿದ್ದರು. 1,100 ಗಂಟೆಗಳ ಹಾರಾಟ ಅನುಭವ ಹೊಂದಿರುವ ಕ್ಲೈವ್ ಕುಂದರ್ ಕೋ ಪೈಲಟ್ ಆಗಿದ್ದರು.
ಏರ್ ಇಂಡಿಯಾ ವಿಮಾನ 171ರ ಭೀಕರ ಅಪಘಾತದ ಬಗ್ಗೆ ವಿಮಾನ ಅಪಘಾತ ತನಿಖಾ ಬ್ಯೂರೋ (ಎಎಐಬಿ) ಔಪಚಾರಿಕ ತನಿಖೆಯನ್ನು ಪ್ರಾರಂಭಿಸಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಗುರುವಾರ ದೃಢಪಡಿಸಿದ್ದಾರೆ.