ಅಹಮದಾಬಾದ್: ಗುಜರಾತ್ ನ ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ಗುರುವಾರ ಏರ್ ಇಂಡಿಯಾ ವಿಮಾನ ಪತನವಾಗಿ 241 ಪ್ರಯಾಣಿಕರು ಮತ್ತು ಸಿಬ್ಬಂದಿ ಸೇರಿದಂತೆ ಒಟ್ಟು 265 ಜನ ಮೃತಪಟ್ಟಿದ್ದಾರೆ.
ಭಾರತೀಯ ಜೀವ ವಿಮಾ ನಿಗಮ(LIC) ಶುಕ್ರವಾರ ಏರ್ ಇಂಡಿಯಾ ವಿಮಾನ ಅಪಘಾತ ಸಂತ್ರಸ್ತರಿಗೆ ಕ್ಲೈಮ್ ಸೆಟಲ್‌ಮೆಂಟ್ ಪ್ರಕ್ರಿಯೆಯನ್ನು ಸಡಿಲಗೊಳಿಸಿದೆ ಮತ್ತು ಪ್ರಕ್ರಿಯೆಯನ್ನು ತ್ವರಿತಗೊಳಿಸಿರುವುದಾಗಿ ತಿಳಿಸಿದೆ.
ವಿಮಾನ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳನ್ನು ಬೆಂಬಲಿಸಲು ನಿಗಮವು ಬದ್ಧವಾಗಿದೆ ಮತ್ತು ಕ್ಲೈಮ್ ಸೆಟಲ್‌ಮೆಂಟ್ ಪ್ರಕ್ರಿಯೆ ತ್ವರಿತಗೊಳಿಸುವುದಾಗಿ ಎಲ್ ಐಸಿ ಹೇಳಿದೆ.
"LIC ಪಾಲಿಸಿಗಳ ಹಕ್ಕುದಾರರ ಕಷ್ಟಗಳನ್ನು ತಗ್ಗಿಸಲು LIC ಅನೇಕ ರಿಯಾಯಿತಿಗಳನ್ನು ಘೋಷಿಸಿದೆ. ಮರಣ ಪ್ರಮಾಣಪತ್ರಗಳಿಗೆ ಬದಲಾಗಿ, ವಿಮಾನ ಅಪಘಾತದಲ್ಲಿ ಮೃತಪಟ್ಟ ಬಗ್ಗೆ ಯಾವುದೇ ಸರ್ಕಾರಿ ದಾಖಲೆಗಳಲ್ಲಿರುವ ಪುರಾವೆಗಳು ಅಥವಾ ಕೇಂದ್ರ/ರಾಜ್ಯ ಸರ್ಕಾರ/ವಿಮಾನಯಾನ ಅಧಿಕಾರಿಗಳು ಪಾವತಿಸಿದ ಯಾವುದೇ ಪರಿಹಾರವನ್ನು ಸಾವಿನ ಪುರಾವೆಯಾಗಿ ಸ್ವೀಕರಿಸಲಾಗುತ್ತದೆ" ಎಂದು ವಿಮಾ ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
ಹೆಚ್ಚಿನ ಸಹಾಯಕ್ಕಾಗಿ, ಪಾಲಿಸಿದಾರರು LIC ಯ ಹತ್ತಿರದ ಶಾಖೆ ಅಥವಾ ವಿಭಾಗವನ್ನು ಸಂಪರ್ಕಿಸಬಹುದು ಮತ್ತು LIC ಯ ಕಾಲ್ ಸೆಂಟರ್ 022-68276827 ಗೆ ಸಹ ಕರೆ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ.
ಏತನ್ಮಧ್ಯೆ, ಈ ದುರಂತದಲ್ಲಿ ಮೃತಪಟ್ಟ ತನ್ನ ಗ್ರಾಹಕರ ನೆರವಿಗೆ ಧಾವಿಸಲು, ಸಾವು ಮತ್ತು ಅಂಗವೈಕಲ್ಯ ಕ್ಲೈಮ್‌ಗಳ ಪ್ರಕ್ರಿಯೆಗೆ ಆದ್ಯತೆ ನೀಡಲು ಮೀಸಲಾದ ವಿಶೇಷ ಕ್ಲೈಮ್ ಇತ್ಯರ್ಥ ಡೆಸ್ಕ್ ಅನ್ನು ಸ್ಥಾಪಿಸಲಾಗಿದೆ ಎಂದು ಬಜಾಜ್ ಅಲಿಯಾನ್ಸ್ ಲೈಫ್ ಇನ್ಶುರೆನ್ಸ್ ಹೇಳಿದೆ.