ಅಹ್ಮದಾಬಾದ್: ಗುಜರಾತ್ ನ ಅಹ್ಮದಾಬಾದ್ ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತ ಪ್ರಕರಣದಲ್ಲಿ ಸಾವಿನ ಸಂಖ್ಯೆ 274ಕ್ಕೆ ಏರಿಕೆಯಾಗಿದ್ದು, ದುರಂತ ನಡೆದ ಬಿಜೆ ವೈದ್ಯಕೀಯ ಕಾಲೇಜು ಹಾಸ್ಚೆಲ್ ನಲ್ಲಿದ್ದ ವಿದ್ಯಾರ್ಥಿಗಳ ಸಾವಿನ ಸಂಖ್ಯೆಯಲ್ಲೂ ಗಣನೀಯ ಏರಿಕೆಯಾಗಿದೆ.
ಗುಜರಾತ್‌ನ ಅಹಮದಾಬಾದ್‌ನಿಂದ (Ahmedabad Plane Crash) ಗ್ಯಾಟ್ವಿಕ್ (ಇಂಗ್ಲೆಂಡ್)ಗೆ ಹೋಗುತ್ತಿದ್ದ ಏರ್ ಇಂಡಿಯಾ ಎಐ 171 ವಿಮಾನ ಟೇಕ್ ಆಫ್ ಆದ ಕೇವಲ ಐದೇ ನಿಮಿಷದಲ್ಲಿ ಪತನಗೊಂಡಿತು. ವಿಮಾನದಲ್ಲಿ 10 ಸಿಬ್ಬಂದಿ, ಇಬ್ಬರು ಪೈಲಟ್ ಗಳು ಸೇರಿದಂತೆ 242 ಜನರು ಈ ವಿಮಾನದಲ್ಲಿದ್ದರು. ಈ ಪೈಕಿ 241 ಮಂದಿ ಸಾವನ್ನಪ್ಪಿದ್ದಾರೆ.
ವಿಮಾನದಲ್ಲಿ 169 ಭಾರತೀಯರು, 53 ಬ್ರಿಟಿಷ್ ಪ್ರಜೆಗಳು, 7 ಪೋರ್ಚುಗೀಸ್ ಮತ್ತು ಒಬ್ಬ ಕೆನಡಾದ ಪ್ರಯಾಣಿಕ ಇದ್ದರು. ಈ ವಿಮಾನ ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ಇದ್ದ ಬಿಜೆ ವೈದ್ಯಕೀಯ ಕಾಲೇಜು ಹಾಸ್ಟೆಲ್ ಕಟ್ಟಡಕ್ಕೆ ಅಪ್ಪಳಿಸಿ ಸ್ಫೋಟವಾಗಿತ್ತು.
ವಿಮಾನ ಲಂಡನ್ ಗೆ ತೆರಳುತ್ತಿದ್ದರಿಂದ ವಿಮಾನದಲ್ಲಿ ಒಂದು ಲಕ್ಷ ಲೀಟರ್ ಗೂ ಅಧಿಕ ಪ್ರಮಾಣ ಇಂಧನವಿತ್ತು, ಹೀಗಾಗಿ ವಿಮಾನ ಢಿಕ್ಕಿಯಾದ ಕೆಲವೇ ಕ್ಷಣಗಳಲ್ಲಿ ವಿಮಾನ ಸ್ಫೋಟಗೊಂಡು ವಿಮಾನಲ್ಲಿದ್ದ ಅಪಾರ ಪ್ರಮಾಣದ ಇಂಧನದೊಂದಿಗೆ ಹೊತ್ತಿ ಉರಿದಿದೆ.
ಈ ವೇಳೆ ಕೇವಲ ವಿಮಾನದೊಳಗಿದ್ದ ಪ್ರಯಾಣಿಕರು ಮಾತ್ರವಲ್ಲದೇ ಹಾಸ್ಟೆಲ್ ನೊಳಗೆ ಆಗಷ್ಟೇ ಊಟಕ್ಕೆ ಕುಳಿತಿದ್ದ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳು ಕೂಡ ಸ್ಫೋಟದ ತೀವ್ರತೆಯಲ್ಲಿ ಸುಟ್ಟು ಕರಕಲಾದರು. ಇದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಕೂಡ ದುರಂತಕ್ಕೆ ಬಲಿಯಾಗಿದ್ದಾರೆ.
ಸಾವಿನ ಸಂಖ್ಯೆ 274ಕ್ಕೆ ಏರಿಕೆ
ಇನ್ನು ಈ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 274ಕ್ಕೆ ಏರಿಕೆಯಾಗಿದ್ದು, ಈ ಪೈಕಿ 241 ಮಂದಿ ವಿಮಾನದಲ್ಲಿದ್ದವರಾಗಿದ್ದರೆ, ಬಾಕಿ 33 ಮಂದಿ ಹೊರಗಿನವರಾಗಿದ್ದಾರೆ. ಈ ಪೈಕಿ ಹಾಸ್ಟೆಲ್ ವಿದ್ಯಾರ್ಥಿಗಳು, 10 ವೈದ್ಯರು ಮತ್ತು ಹಾಸ್ಟೆಲ್ ಅವರಣದಲ್ಲಿದ್ದವರು ಎಂದು ಹೇಳಲಾಗಿದೆ. ಅಂತೆಯೇ ಈ ದುರಂತಲ್ಲಿ ಗಾಯಗೊಂಡಿದ್ದ 24 ಮಂದಿ ವಿದ್ಯಾರ್ಥಿಗಳಿಗೆ ಚಿಕಿತ್ಸೆ ಮುಂದುವರೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬ್ಲಾಕ್ ಬಾಕ್ಸ್ ಪತ್ತೆ, ಅವಶೇಷಗಳ ತೆರವು ಕಾರ್ಯ
ಇನ್ನು ದುರಂತ ನಡೆದ ಸ್ಥಳದಲ್ಲಿ ವಿಮಾನದ ಬ್ಲಾಕ್ ಬಾಕ್ಸ್ ಪತ್ತೆಯಾಗಿದ್ದು, ವಿಮಾನದ ಇತರೆ ಅವಶೇಷಗಳನ್ನು ತೆರವು ಗೊಳಿಸುವ ಕಾರ್ಯ ಭರದಿಂದ ಸಾಗಿದೆ. ವಿಮಾನ ಢಿಕ್ಕಿಯಾದ ಹಾಸ್ಟೆಲ್ ಕಟ್ಟಡ ಸಂಪೂರ್ಣ ಧ್ವಂಸವಾಗಿದ್ದು, ಅಲ್ಲಿನ ಹಾಸ್ಟೆಲ್ ವಿದ್ಯಾರ್ಥಿಗಳು ಹಾಸ್ಟೆಲ್ ತೊರೆದು ಬೇರೆಡೆ ಆಶ್ರಯ ಪಡೆದಿದ್ದಾರೆ.