ನವದೆಹಲಿ: ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಮತ್ತು ಇತರ ಮೂವರನ್ನು ಹೊತ್ತು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹೊರಟಿದ್ದ ಆಕ್ಸಿಯಮ್ -4 ವಾಣಿಜ್ಯ ಮಿಷನ್ ಜೂನ್ 19 ರಂದು ಉಡಾವಣೆಗೊಳ್ಳುವ ಗುರಿಯನ್ನು ಹೊಂದಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಶನಿವಾರ ಪ್ರಕಟಿಸಿದೆ.
ಜೂನ್ 11 ರಂದು ಫ್ಲೋರಿಡಾದಲ್ಲಿರುವ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಆಕ್ಸಿಯಮ್ ಸ್ಪೇಸ್ ಮಿಷನ್ ಉಡಾವಣೆಗೊಳ್ಳಬೇಕಿತ್ತು, ಆದರೆ ಸ್ಪೇಸ್‌ಎಕ್ಸ್‌ನ ಫಾಲ್ಕನ್ -9 ರಾಕೆಟ್‌ನಲ್ಲಿ ಇಂಧನ ಸೋರಿಕೆ ಮತ್ತು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ (ISS) ರಷ್ಯಾದ ವಿಭಾಗದಲ್ಲಿ ಸೋರಿಕೆಯಿಂದಾಗಿ ಉಡಾವಣೆ ವಿಳಂಬವಾಯಿತು.
ಆಕ್ಸಿಯಮ್ ಸ್ಪೇಸ್ ಮತ್ತು ಸ್ಪೇಸ್‌ಎಕ್ಸ್ ನಡುವಿನ ಅನುಸರಣಾ ಸಮನ್ವಯ ಸಭೆಯಲ್ಲಿ, ಫಾಲ್ಕನ್ 9 ಉಡಾವಣಾ ವಾಹನದಲ್ಲಿ ಕಂಡುಬಂದ ದ್ರವ ಆಮ್ಲಜನಕ ಸೋರಿಕೆ ಸಮಸ್ಯೆಯನ್ನು ಬಗೆಹರಿಸಲಾಗಿದೆ ಎಂದು ಇಸ್ರೋ ಹೇಳಿಕೆಯಲ್ಲಿ ತಿಳಿಸಿದೆ.
ಪ್ರತ್ಯೇಕವಾಗಿ, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಜ್ವೆಜ್ಡಾ ಸೇವಾ ಮಾಡ್ಯೂಲ್‌ನಲ್ಲಿನ ಒತ್ತಡದ ಅಸಂಗತತೆಯನ್ನು ನಿರ್ಣಯಿಸಲು ನಾಸಾದೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಆಕ್ಸಿಯಮ್ ಸ್ಪೇಸ್ ತಿಳಿಸಿದೆ.
ಆಕ್ಸಿಯಮ್ ಸ್ಪೇಸ್ ಜೂನ್ 19ರಂದು ಆಕ್ಸ್-04 ಮಿಷನ್ ಉಡಾವಣೆಗೆ ಗುರಿಯನ್ನು ಹೊಂದಿದೆ ಎಂದು ಇಸ್ರೋ ತಿಳಿಸಿದೆ.
ಗಗನಯಾತ್ರಿಗಳು ಮೂಲತಃ ಮೇ 29 ರಂದು ಉಡಾವಣೆಗೆ ನಿರ್ಧರಿಸಿದ್ದರು. ಜೂನ್ 8, ಜೂನ್ 10 ಮತ್ತು ಜೂನ್ 11 ರಂದು ಉಡಾವಣಾ ರಾಕೆಟ್ ಮತ್ತು ಬಾಹ್ಯಾಕಾಶ ಕ್ಯಾಪ್ಸುಲ್‌ನ ಪೂರೈಕೆದಾರರಾದ ಸ್ಪೇಸ್‌ಎಕ್ಸ್, ಫಾಲ್ಕನ್-9 ರಾಕೆಟ್‌ನಲ್ಲಿ ದ್ರವ ಆಮ್ಲಜನಕ ಸೋರಿಕೆ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು.
ಮಾಜಿ ನಾಸಾ ಗಗನಯಾತ್ರಿ ಮತ್ತು ಆಕ್ಸಿಯಮ್ ಸ್ಪೇಸ್‌ನಲ್ಲಿ ಮಾನವ ಬಾಹ್ಯಾಕಾಶ ಹಾರಾಟದ ನಿರ್ದೇಶಕಿ ಪೆಗ್ಗಿ ವಿಟ್ಸನ್ ಈ ವಾಣಿಜ್ಯ ಕಾರ್ಯಾಚರಣೆಯನ್ನು ಮುನ್ನಡೆಸಲಿದ್ದಾರೆ, ಇಸ್ರೋ ಗಗನಯಾತ್ರಿ ಶುಭಾಂಶು ಶುಕ್ಲಾ ಪೈಲಟ್ ಆಗಿ ಕರ್ತವ್ಯ ನಿರ್ವಹಿಸಲಿದ್ದಾರೆ.
ಇಬ್ಬರು ಮಿಷನ್ ತಜ್ಞರು ಪೋಲೆಂಡ್‌ನ ಯುರೋಪಿಯನ್ ಸ್ಪೇಸ್ ಏಜೆನ್ಸಿ (ESA) ಯೋಜನೆಯ ಗಗನಯಾತ್ರಿಗಳಾದ ಸ್ಲಾವೋಸ್ಜ್ ಉಜ್ನಾನ್ಸ್ಕಿ-ವಿಸ್ನಿಯೆವ್ಸ್ಕಿ ಮತ್ತು ಹಂಗೇರಿಯ ಟಿಬೋರ್ ಕಪು ಆಗಿದ್ದಾರೆ.