ಅಹಲ್ಯಾನಗರ: ಮಹಾರಾಷ್ಟ್ರದ ಅಹಲ್ಯಾನಗರ ಜಿಲ್ಲೆಯ ಶನಿ ಶಿಂಗ್ನಾಪುರ ದೇವಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದ 114 ಮುಸ್ಲಿಂ ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ.
ಶಿಸ್ತು ಉಲ್ಲಂಘನೆ, ಅಕ್ರಮಗಳನ್ನು ಉಲ್ಲೇಖಿಸಿ 114 ಮುಸ್ಲಿಮರು ಸೇರಿದಂತೆ 167 ಉದ್ಯೋಗಿಗಳನ್ನು ದೇವಾಲಯದ ಟ್ರಸ್ಟ್ ವಜಾಗೊಳಿಸಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಈ ಸಿಬ್ಬಂದಿಗಳು ಕೆಲವು ಸೇವಾ ಮತ್ತು ಶಿಸ್ತಿನ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡುಬಂದಿದ್ದರಿಂದ ಈ ನಿರ್ಧಾರವನ್ನು ಸಂಪೂರ್ಣವಾಗಿ ಆಡಳಿತಾತ್ಮಕ ಆಧಾರದ ಮೇಲೆ ತೆಗೆದುಕೊಳ್ಳಲಾಗಿದೆ ಎಂದು ಟ್ರಸ್ಟ್‌ನ ಅಧಿಕಾರಿಯೊಬ್ಬರು ಹೇಳಿದ್ದಾರೆ.
ದೇವಾಲಯದ ಆವರಣದಲ್ಲಿ ಮುಸ್ಲಿಂ ಸಿಬ್ಬಂದಿ ಇರುವುದನ್ನು ವಿರೋಧಿಸಿ ಇತ್ತೀಚಿಗೆ ಹಿಂದೂ ಸಂಘಟನೆಗಳು ಭಾರಿ ಪ್ರತಿಭಟನೆ ನಡೆಸಿದ್ದವು. ಶನಿ ದೇವರ ದೇವಾಲಯದಲ್ಲಿ ಹಿಂದೂಯೇತರ ಕೆಲಸಗಾರರು ಇರುವುದು ಸರಿಯಲ್ಲ ಎಂದು ಈ ಗುಂಪುಗಳು ಹೇಳಿದ್ದವು. ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಜೂನ್ 14 ರಂದು ದೇವಸ್ಥಾನದ ಹೊರಗೆ ಬೃಹತ್ ಪ್ರತಿಭಟನೆ ನಡೆಸುವುದಾಗಿ ಹಿಂದೂ ಸಮುದಾಯ ಎಚ್ಚರಿಕೆ ನೀಡಿತ್ತು ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.
ಧರ್ಮದ ಆಧಾರದ ಮೇಲೆ ಉದ್ಯೋಗಿಗಳನ್ನು ವಜಾಗೊಳಿಸಿಲ್ಲ ಎಂದು ದೇವಾಲಯ ಟ್ರಸ್ಟ್ ಹೇಳಿಕೊಂಡರೂ ವಜಾಗೊಂಡವರಲ್ಲಿ ಹೆಚ್ಚಿನ ಸಂಖ್ಯೆಯ ಮುಸ್ಲಿಂ ಉದ್ಯೋಗಿಗಳೇ ಇದ್ದಾರೆ. ಶನಿ ಶಿಂಗ್ನಾಪುರ ದೇವಾಲಯ ದೀರ್ಘಕಾಲದಿಂದ ಸಂಪ್ರದಾಯಗಳಿಗೆ ಹೆಸರುವಾಸಿಯಾಗಿದೆ.