ನವದೆಹಲಿ: ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್) ಕಳುಹಿಸುವ ಮಹತ್ವಾಕಾಂಕ್ಷೆಯ 'ಆ್ಯಕ್ಸಿಯಂ–4' ಮಿಷನ್ ಮತ್ತೆ ಮುಂದೂಡಿಕೆಯಾಗಿದೆ.
ರಷ್ಯಾದ ವಿಭಾಗದಲ್ಲಿ ಇತ್ತೀಚೆಗೆ ನಡೆದ ದುರಸ್ತಿಗಳ ನಂತರ ಕಕ್ಷೆಯ ಪ್ರಯೋಗಾಲಯದಲ್ಲಿನ ಕಾರ್ಯಾಚರಣೆಗಳನ್ನು ಮೌಲ್ಯಮಾಪನ ಮಾಡಲು ನಾಸಾಗೆ ಅವಕಾಶ ನೀಡುವ ಸಲುವಾಗಿ, ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರ ಆ್ಯಕ್ಸಿಯಂ -4 ಮಿಷನ್ ಅನ್ನು ಜೂನ್ 22ಕ್ಕೆ ನಡೆಸಲು ನಿರ್ಧರಿಸಲಾಗಿದೆ ಎಂದು ಆ್ಯಕ್ಸಿಯಂ ಸ್ಪೇಸ್ ಬುಧವಾರ ತಿಳಿಸಿದೆ.
ಜೂನ್ 11ರಂದುಫ್ಲಾರಿಡಾದಲ್ಲಿರುವ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಸ್ಪೇಸ್‌ಎಕ್ಸ್‌ನ ಫಾಲ್ಕನ್–9 ರಾಕೆಟ್ ಅನ್ನು ಉಡಾವಣೆ ಮಾಡಬೇಕಿತ್ತು. ಆದರೆ, ರಾಕೆಟ್‌ನಲ್ಲಿ ಇಂಧನ ಸೋರುತ್ತಿದ್ದ ಕಾರಣ ಕೊನೆಯ ಕ್ಷಣದಲ್ಲಿ ಉಡಾವಣೆಯನ್ನು ರದ್ದು ಮಾಡಲಾಗಿತ್ತು.
ಮೇ 29, ಜೂನ್ 8 ಮತ್ತು ಜೂನ್ 10ರಂದು ಸಹ ರಾಕೆಟ್ ಉಡಾವಣೆಗೆ ದಿನಾಂಕ ನಿಗದಿ ಮಾಡಿ ಆನಂತರ ಮುಂದೂಡಲಾಗಿತ್ತು. ಉಡಾವಣೆ ಹಲವು ಬಾರಿ ಮುಂದೂಡಿಕೆ ಬಳಿಕ ಜೂನ್ 19ಕ್ಕೆ ಮತ್ತೆ ಸಮಯ ನಿಗದಿ ಮಾಡಲಾಗಿತ್ತು. ಇದೀಗ, ಆ ಸಮಯವನ್ನು ರದ್ದು ಮಾಡಿ ಹೊಸ ದಿನಾಂಕವನ್ನು ಪ್ರಕಟಿಸಲಾಗಿದೆ. ಆ್ಯಕ್ಸಿಯಂ -4 ಮಿಷನ್ ಅನ್ನು ಜೂನ್ 22ರಂದು ನಡೆಸಲು ಆಕ್ಸಿಯಮ್ ಸ್ಪೇಸ್ ಮತ್ತು ಸ್ಪೇಸ್‌ಎಕ್ಸ್ ಸಂಸ್ಥೆಗಳು ನಿರ್ಧರಿಸಿವೆ.
ಭಾರತೀಯ ಗಗನಯಾತ್ರಿ, ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್ಎಸ್) ತೆರಳಲು ಸಿದ್ಧತೆ ನಡೆಸಿದ್ದು, ಈ ಯೋಜನೆಯಲ್ಲಿ, ಅವರು ಮಧುಮೇಹಕ್ಕೆ (ಸಕ್ಕರೆ ಕಾಯಿಲೆ) ಸಂಬಂಧಿಸಿದಂತೆ ಒಂದು ಮಹತ್ವದ ಪ್ರಯೋಗವನ್ನು ಕೈಗೊಳ್ಳಲಿದ್ದಾರೆ.
ಆಕ್ಸಿಯಮ್-4 ಬಾಹ್ಯಾಕಾಶ ಯೋಜನೆ ನಾಲ್ವರು ಗಗನಯಾತ್ರಿಗಳನ್ನು ಒಳಗೊಂಡಿದ್ದು, ಈ ಸಂಶೋಧನೆ, ವಿಜ್ಞಾನಿಗಳಿಗೆ ಮಧುಮೇಹವನ್ನು ಇನ್ನಷ್ಟು ಅರ್ಥೈಸಿಕೊಳ್ಳಲು, ಮತ್ತು ಬಾಹ್ಯಾಕಾಶದಲ್ಲಿ ಅದರ ಬದಲಾವಣೆಗಳನ್ನು ತಿಳಿಯಲು ನೆರವಾಗಲಿದೆ.
ಗಗನಯಾತ್ರಿಗಳು ತಮ್ಮ ಎರಡು ವಾರಗಳ ವಾಸದ ಅವಧಿಯಲ್ಲಿ, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಶೂನ್ಯ ಗುರುತ್ವಾಕರ್ಷಣೆಯಲ್ಲಿ ಈ ಅಧ್ಯಯನ ಕೈಗೊಳ್ಳಲಿದ್ದಾರೆ. 'ಸೂಟ್ ರೈಡ್' ಎಂಬ ಹೆಸರು ಹೊಂದಿರುವ ಈ ಪ್ರಯೋಗ, ಇನ್ಸುಲಿನ್ ಅವಲಂಬಿತ ಗಗನಯಾತ್ರಿಗಳಿಗೆ (ಐಡಿಡಿಎಂ) ನೆರವಾಗುವ ನಿಟ್ಟಿನಲ್ಲಿ ಬಹುಮುಖ್ಯ ಪ್ರಯೋಗವಾಗಿದೆ. ಹಿಂದೆಲ್ಲ ಮಧುಮೇಹ ಎನ್ನುವುದು ಆಸಕ್ತರನ್ನೂ ಗಗನಯಾತ್ರೆಯಿಂದ ಅನರ್ಹಗೊಳಿಸಲು ಕಾರಣವಾಗಿತ್ತು. ಆದರೆ, ಈ ಯೋಜನೆ ಭವಿಷ್ಯದಲ್ಲಿ ಮಧುಮೇಹಿಗಳೂ ಗಗನಯಾತ್ರೆ ನಡೆಸುವಂತೆ ಮಾಡುವ ನಿಟ್ಟಿನಲ್ಲಿ ಪ್ರಗತಿ ಸಾಧಿಸಲಿದೆ.