ನವದೆಹಲಿ: ಇರಾನ್‌ನೊಂದಿಗೆ ನಡೆಯುತ್ತಿರುವ ಸಂಘರ್ಷದ ಹಿನ್ನೆಲೆಯಲ್ಲಿ ಭದ್ರತಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಇಸ್ರೇಲ್ ತೊರೆಯಲು ಬಯಸುವ ಭಾರತೀಯರ ಸ್ಥಳಾಂತರಕ್ಕೆ ಭಾರತ ಸರ್ಕಾರ ನಿರ್ಧರಿಸಿದೆ.
ಇಸ್ರೇಲ್‌ನ ಬೀರ್‌ಶೆಬಾ ಪ್ರದೇಶದಲ್ಲಿನ ಆಸ್ಪತ್ರೆಯೊಂದಕ್ಕೆ ಇರಾನ್‌ನ ಕ್ಷಿಪಣಿ ದಾಳಿ ನಡೆದ ಕೆಲ ತಾಸುಗಳ ನಂತರ ತನ್ನ ನಾಗರಿಕರನ್ನು ಸ್ಥಳಾಂತರಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿದೆ.
"ಇಸ್ರೇಲ್ ಮತ್ತು ಇರಾನ್ ನಡುವಿನ ಇತ್ತೀಚಿನ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಇಸ್ರೇಲ್ ನಿಂದ ಹೊರ ಹೋಗಲು ಬಯಸುವ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲು ಭಾರತ ಸರ್ಕಾರ ನಿರ್ಧರಿಸಿದೆ ಎಂದು
ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ತಿಳಿಸಿದೆ. ಭೂ ಗಡಿಗಳ ಮೂಲಕ ತದನಂತರ ವಿಮಾನದ ಮೂಲಕ ಇಸ್ರೇಲ್‌ನಿಂದ ಭಾರತಕ್ಕೆ ಸ್ಥಳಾಂತರಿಸಲಾಗುವುದು ಎಂದು ಹೇಳಿದೆ.
ಇಸ್ರೇಲ್‌ನೊಂದಿಗಿನ ಸಂಘರ್ಷವನ್ನು ಕೈ ಬಿಡುವ ಲಕ್ಷಣಗಳು ಕಾಣಿಸದ ಹಿನ್ನೆಲೆಯಲ್ಲಿ ಇರಾನ್‌ನಿಂದ ತನ್ನ ಪ್ರಜೆಗಳನ್ನು ಸ್ಥಳಾಂತರಿಸಲು "ಆಪರೇಷನ್ ಸಿಂಧು" ಕಾರ್ಯಾಚರಣೆಯನ್ನು ಭಾರತ ಬುಧವಾರ ಪ್ರಾರಂಭಿಸಿತ್ತು. ಯುದ್ಧಪೀಡಿತ ಇರಾನ್‌ನಿಂದ ಅರ್ಮೇನಿಯಾಗೆ ಸ್ಥಳಾಂತರಿಸಲ್ಪಟ್ಟ 110 ಭಾರತೀಯ ವಿದ್ಯಾರ್ಥಿಗಳನ್ನು ಹೊತ್ತ ಮೊದಲ ವಿಮಾನ ಬುಧವಾರ ತಡರಾತ್ರಿ ನವದೆಹಲಿಗೆ ಬಂದಿಳಿಯಿತು.
ವಿದೇಶದಲ್ಲಿರುವ ಭಾರತೀಯ ಪ್ರಜೆಗಳ ಸುರಕ್ಷತೆ ಮತ್ತು ಭದ್ರತೆಗೆ ಭಾರತ ಸರ್ಕಾರವು ಹೆಚ್ಚಿನ ಆದ್ಯತೆ ನೀಡುತ್ತದೆ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ MEA ಹೇಳಿದೆ. ಇಸ್ರೇಲ್‌ನಲ್ಲಿರುವ ಎಲ್ಲಾ ಭಾರತೀಯ ನಾಗರಿಕರು ಜಾಗರೂಕರಾಗಿರಲು ಮತ್ತು ಇಸ್ರೇಲಿ ಅಧಿಕಾರಿಗಳು ಹೊರಡಿಸಿದ ಸುರಕ್ಷತಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಟೆಲ್ ಅವೀವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸೂಚಿಸಿದೆ.
ಇಸ್ರೇಲ್ ರಾಯಭಾರ ಕಚೇರಿ ಸಾಧ್ಯವಾದಷ್ಟು ಎಲ್ಲಾ ನೆರವು ನೀಡುವ ನಿಟ್ಟಿನಲ್ಲಿ ಭಾರತೀಯ ಸಮುದಾಯದೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದೆ. ಟೆಲ್ ಅವಿವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಭಾರತೀಯರನ್ನು ಸ್ಥಳಾಂತರಿಸಲು ವ್ಯವಸ್ಥೆ ಮಾಡಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಈಗಾಗಲೇ ನೋಂದಾಯಿಸದ ಎಲ್ಲಾ ಭಾರತೀಯರು (https://www.indembassyisrael.gov.in/indian_national_reg) ನಲ್ಲಿ ಟೆಲ್ ಅವಿವ್‌ನಲ್ಲಿರುವ ಭಾರತದ ರಾಯಭಾರ ಕಚೇರಿಯಲ್ಲಿ ನೋಂದಾಯಿಸಿಕೊಳ್ಳಲು ಕೋರಲಾಗಿದೆ.
ಯಾವುದೇ ಮಾಹಿತಿಗೆ ಟೆಲ್ ಅವಿವ್‌ನ ಭಾರತೀಯ ರಾಯಭಾರ ಕಚೇರಿಯ 24/7 ನಿಯಂತ್ರಣ ಕೊಠಡಿಯನ್ನು ಸಂಪರ್ಕಿಸಬಹುದು: ದೂರವಾಣಿ ಸಂಖ್ಯೆಗಳು: +972 54-7520711; +972 54-3278392; ಇಮೇಲ್: cons1.telaviv@mea.gov.in, ಸಂಪರ್ಕಿಸಬಹುದು ಎಂದು ಎಂಇಎ ಹೇಳಿದೆ.