ಕುರುಕ್ಷೇತ್ರ: ಯೋಗವು "ಜೀವನದ ಕಲೆ" ಎಂದು ಪ್ರತಿಪಾದಿಸಿದ ಹರಿಯಾಣ ಮುಖ್ಯಮಂತ್ರಿ ನಯಬ್ ಸಿಂಗ್ ಸೈನಿ ಅವರು ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಐದು ನಿಮಿಷಗಳ ಯೋಗ ವಿರಾಮ ನೀಡಲಾಗುವುದು ಮತ್ತು ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಏಕರೂಪದ ಯೋಗ ಪಠ್ಯಕ್ರಮವನ್ನು ಜಾರಿಗೆ ತರಲಾಗುವುದು ಎಂದು ಶನಿವಾರ ಘೋಷಿಸಿದರು.
ಇಂದು ಕುರುಕ್ಷೇತ್ರದ ಬ್ರಹ್ಮ ಸರೋವರದಲ್ಲಿ 11ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ(IDY) ಪ್ರಯುಕ್ತ ನಡೆದ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ಮಾತನಾಡಿದ ಸೈನಿ, ಈ ವರ್ಷದ “ಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಯೋಗ” ಎಂಬ ಘೋಷ ವಾಕ್ಯವು ಯೋಗವು ಕೇವಲ ವೈಯಕ್ತಿಕ ಯೋಗಕ್ಷೇಮಕ್ಕಾಗಿ ಅಲ್ಲ, ಬದಲಾಗಿ ಎಲ್ಲಾ ಮಾನವೀಯತೆಯ ಕಲ್ಯಾಣಕ್ಕಾಗಿ ಎಂದು ಹೇಳಿದರು.
ಯೋಗ ಗುರು ಬಾಬಾ ರಾಮದೇವ್, ಹರಿಯಾಣ ರಾಜ್ಯಪಾಲ ಬಂಡಾರು ದತ್ತಾತ್ರೇಯ, ರಾಜ್ಯದ ಆಯುಷ್ ಮತ್ತು ಆರೋಗ್ಯ ಸಚಿವೆ ಕುಮಾರಿ ಆರತಿ ಸಿಂಗ್ ರಾವ್ ಮತ್ತು ಸಂಸದ ನವೀನ್ ಜಿಂದಾಲ್ ಕೂಡ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣವನ್ನು ಕಾರ್ಯಕ್ರಮದ ಸಂದರ್ಭದಲ್ಲಿ ನೇರ ಪ್ರಸಾರ ಮಾಡಲಾಯಿತು.
ರಾಜ್ಯಮಟ್ಟದ ಕಾರ್ಯಕ್ರಮಕ್ಕಾಗಿ ಪವಿತ್ರ ಬ್ರಹ್ಮ ಸರೋವರದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು ಸೇರಿದ್ದರೆ, ರಾಜ್ಯದ 22 ಜಿಲ್ಲೆಗಳು ಮತ್ತು 121 ಬ್ಲಾಕ್‌ಗಳಲ್ಲಿ ನಡೆದ ಯೋಗ ಕಾರ್ಯಕ್ರಮಗಳಲ್ಲಿ ಸುಮಾರು 20 ಲಕ್ಷ ಜನರು ಭಾಗವಹಿಸಿದ್ದರು.