ಅಹಮದಾಬಾದ್: ಜೂನ್ 12 ರಂದು ಅಹಮದಾಬಾದ್‌ನ ವೈದ್ಯಕೀಯ ಕಾಲೇಜು ಹಾಸ್ಟೆಲ್‌ನಲ್ಲಿ ಅಪಘಾತಕ್ಕೀಡಾದ ಏರ್ ಇಂಡಿಯಾ ವಿಮಾನದ ಅವಶೇಷಗಳನ್ನು ಗುಜರಾತ್ ಪೊಲೀಸರು ಭಾನುವಾರ ವಿಮಾನ ನಿಲ್ದಾಣದ ಆವರಣಕ್ಕೆ ಸ್ಥಳಾಂತರಿಸಲು ಪ್ರಾರಂಭಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಂಡನ್‌ಗೆ ತೆರಳುತ್ತಿದ್ದ ವಿಮಾನವು ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ ಕೆಲವೇ ಕ್ಷಣಗಳಲ್ಲಿ ಮೇಘಾನಿನಗರದಲ್ಲಿರುವ ಹಾಸ್ಟೆಲ್ ಸಂಕೀರ್ಣಕ್ಕೆ ಅಪ್ಪಳಿಸಿ, ವಿಮಾನದಲ್ಲಿದ್ದ 241 ಜನರು ಸೇರಿದಂತೆ 270 ಜನರು ಸಾವಿಗೀಡಾಗಿದ್ದಾರೆ.
ವಿಮಾನ ಅಪಘಾತ ಸ್ಥಳದಿಂದ ಅವಶೇಷಗಳನ್ನು ವಿಮಾನ ನಿಲ್ದಾಣದ ಆವರಣದಲ್ಲಿರುವ ಗುಜರಾತಿನ ರಾಜ್ಯ ವಿಮಾನಯಾನ ಮೂಲಸೌಕರ್ಯ ಕಂಪನಿ ಲಿಮಿಟೆಡ್ ಕಟ್ಟಡಕ್ಕೆ ಸ್ಥಳಾಂತರಿಸಲಾಗುತ್ತಿದ್ದು, ವಿಮಾನ ಅಪಘಾತ ತನಿಖಾ ಬ್ಯೂರೋದ (ಎಎಐಬಿ) ವಶದಲ್ಲಿರುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
'ಇಲ್ಲಿ ಪತನಗೊಂಡ ಏರ್ ಇಂಡಿಯಾ ವಿಮಾನದ ಅವಶೇಷಗಳನ್ನು ಇಂದಿನಿಂದ ಗುಜರಾತಿನ ಕಟ್ಟಡಕ್ಕೆ ಸ್ಥಳಾಂತರಿಸಲು ಪ್ರಾರಂಭಿಸಿದ್ದೇವೆ. ಇಡೀ ಅವಶೇಷಗಳನ್ನು ಸ್ಥಳಾಂತರಿಸಲು 48 ರಿಂದ 72 ಗಂಟೆಗಳು ಬೇಕಾಗುತ್ತದೆ. ವಿಮಾನ ಅಪಘಾತದ ತನಿಖೆ ನಡೆಸುತ್ತಿರುವ AAIB ವಶದಲ್ಲಿ ಈ ಅವಶೇಷಗಳು ಇರುತ್ತವೆ' ಎಂದು ಸೆಕ್ಟರ್ 2ರ ಜಂಟಿ ಪೊಲೀಸ್ ಆಯುಕ್ತ ಜೈಪಾಲ್ಸಿನ್ಹ್ ರಾಥೋಡ್ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
AAIB ಹೊರತುಪಡಿಸಿ, ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ (NTSB) ವಿಮಾನ ಅಪಘಾತದ ಬಗ್ಗೆ ಸಮಾನಾಂತರ ಅಂತರರಾಷ್ಟ್ರೀಯ ತನಿಖೆಯನ್ನು ನಡೆಸುತ್ತಿದೆ.
ಅಧಿಕಾರಿಗಳ ಪ್ರಕಾರ, ಅಪಘಾತದಲ್ಲಿ ಸಾವಿಗೀಡಾದ ಕನಿಷ್ಠ 247 ಜನರನ್ನು ಡಿಎನ್‌ಎ ಪರೀಕ್ಷೆ ಮೂಲಕ ಗುರುತಿಸಲಾಗಿದೆ ಮತ್ತು 232 ಶವಗಳನ್ನು ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ.