ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಭಾನುವಾರ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರೊಂದಿಗೆ ಮಾತನಾಡಿ, ಮಾತುಕತೆ ಮತ್ತು ರಾಜತಾಂತ್ರಿಕತೆ ಮೂಲಕ ಇಸ್ರೇಲ್ ಜೊತೆಗಿನ ಸಂಘರ್ಷವನ್ನು ತಕ್ಷಣವೇ ಕಡಿಮೆ ಮಾಡುವಂತೆ ಸಲಹೆ ನೀಡಿದ್ದಾರೆ.
ಇರಾನ್‌ನಲ್ಲಿನ ಮೂರು ಅಣ್ವಸ್ತ್ರ ನೆಲೆಗಳ ಮೇಲೆ ಅಮೆರಿಕ ಬಾಂಬ್ ದಾಳಿ ನಡೆಸಿದ ಕೆಲವೇ ಗಂಟೆಗಳ ನಂತರ ಮೋದಿ ಮತ್ತು ಪೆಜೆಶ್ಕಿಯಾನ್ ನಡುವೆ ಫೋನ್ ಸಂಭಾಷಣೆ ನಡೆದಿದೆ.
ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಮೋದಿ, 'ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರೊಂದಿಗೆ ಮಾತನಾಡಿದೆ. ಪರಿಸ್ಥಿತಿಯ ಬಗ್ಗೆ ನಾವು ವಿವರವಾಗಿ ಚರ್ಚಿಸಿದ್ದೇವೆ. ಇತ್ತೀಚಿನ ಉಲ್ಬಣಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದೇವೆ. ಪ್ರಾದೇಶಿಕ ಶಾಂತಿ, ಭದ್ರತೆ ಮತ್ತು ಸ್ಥಿರತೆಯನ್ನು ಶೀಘ್ರವಾಗಿ ಪುನಃಸ್ಥಾಪಿಸಲು ಮತ್ತು ತಕ್ಷಣವೇ ಉಲ್ಬಣವನ್ನು ಕಡಿಮೆ ಮಾಡುವುದು, ಮಾತುಕತೆ ಮತ್ತು ರಾಜತಾಂತ್ರಿಕತೆಗೆ ನಮ್ಮ ಕರೆಯನ್ನು ಪುನರುಚ್ಚರಿಸಿದ್ದೇವೆ' ಎಂದಿದ್ದಾರೆ.
ಇರಾನಿನ ಪರಮಾಣು ಸೌಲಭ್ಯಗಳ ಮೇಲೆ ಅಮೆರಿಕ ದಾಳಿಯ ನಂತರ ಇರಾನ್ ಅಧ್ಯಕ್ಷ ಪೆಜೆಶ್ಕಿಯಾನ್ ಅವರಿಂದ ಕರೆ ಬಂದಿತು. ಅವರು ಪ್ರಧಾನಿ ಮೋದಿ ಅವರಿಗೆ ಪರಿಸ್ಥಿತಿಯ ಬಗ್ಗೆ ವಿವರಿಸಿದರು. ಈ ಕರೆ 45 ನಿಮಿಷಗಳ ಕಾಲ ನಡೆಯಿತು. ಪ್ರಾದೇಶಿಕ ಶಾಂತಿ, ಭದ್ರತೆ ಮತ್ತು ಸ್ಥಿರತೆಯನ್ನು ಉತ್ತೇಜಿಸುವಲ್ಲಿ ಭಾರತವನ್ನು ಸ್ನೇಹಿತ ಮತ್ತು ಪಾಲುದಾರ ಎಂದು ಬಣ್ಣಿಸಿದ ಅವರು, ಭಾರತದ ನಿಲುವು ಮತ್ತು ಉದ್ವಿಗ್ನತೆ ನಿವಾರಣೆ, ಸಂವಾದ ಮತ್ತು ರಾಜತಾಂತ್ರಿಕತೆಗೆ ಕರೆ ನೀಡಿದ್ದಕ್ಕಾಗಿ ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದರು ಎಂದು ಮೂಲಗಳು ತಿಳಿಸಿವೆ.
ಇಸ್ರೇಲ್-ಇರಾನ್ ಸಂಘರ್ಷ ಉಲ್ಬಣಗೊಳ್ಳುತ್ತಿರುವ ಹೊತ್ತಲ್ಲೇ ಮಧ್ಯಪ್ರವೇಶಿಸಿರುವ ಅಮೆರಿಕ, ಇರಾನ್‌ನ ಮೂರು ಪ್ರಮುಖ ಪರಮಾಣು ಮೂಲಸೌಕರ್ಯಗ ಮೇಲೆ ಇಂದು (ಜೂ. 22) ಬೆಳಗ್ಗೆ ದಾಳಿ ನಡೆಸಿದೆ.
ಇರಾನ್ ಮೇಲೆ ದಾಳಿ ನಡೆಸಿರುವ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದ್ದು, ಇರಾನ್‌ನ ಫೋರ್ಡೊ, ನತಾಂಜ್ ಮತ್ತು ಎಸ್ಫಹಾನ್ ಪರಮಾಣು ಕೇಂದ್ರಗಳ ಮೇಲೆ ದಾಳಿ ನಡೆಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಎಲ್ಲ ವಿಮಾನಗಳು ಇರಾನ್ ವಾಯುಪ್ರದೇಶದಿಂದ ಸುರಕ್ಷಿತವಾಗಿ ಹಿಂದಿರುಗಿವೆ. ಅಮೆರಿಕದ ಯೋಧರಿಗೆ ಅಭಿನಂದನೆಗಳು. ಇಂತಹ ಕಾರ್ಯಾಚರಣೆ ನಡೆಸಲು ಜಗತ್ತಿನ ಬೇರೆ ಯಾವುದೇ ಸೈನ್ಯಕ್ಕೂ ಸಾಧ್ಯವಿಲ್ಲ' ಎಂದಿದ್ದಾರೆ.