ವಾರಣಾಸಿ (ಉತ್ತರ ಪ್ರದೇಶ): ಭಾರತದಲ್ಲಿ ಸಮಾಜವಾದದ ಅಗತ್ಯವಿಲ್ಲ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅಭಿಪ್ರಾಯ ವ್ಯಕ್ತಪಡಿಸಿದ್ದು, ಜಾತ್ಯತೀತತೆ ನಮ್ಮ ಸಂಸ್ಕೃತಿಯ ಮೂಲವಲ್ಲ ಎಂದು ಹೇಳಿದ್ದಾರೆ.
ಸಂವಿಧಾನದ ಪೀಠಿಕೆಯಲ್ಲಿ 'ಸಮಾಜವಾದಿ' ಮತ್ತು 'ಜಾತ್ಯತೀತ' ಪದಗಳನ್ನು ಪರಿಶೀಲಿಸಲು ರಾಷ್ಟ್ರೀಯ ಸ್ವಯಂಸೇವಕ ಸಂಘ(RSS) ಕರೆ ನೀಡಿದ್ದು, ಅವುಗಳನ್ನು ತುರ್ತು ಪರಿಸ್ಥಿತಿಯ ಸಮಯದಲ್ಲಿ ಸೇರಿಸಲಾಗಿತ್ತು, ಡಾ ಬಿ ಆರ್ ಅಂಬೇಡ್ಕರ್ ರಚಿಸಿದ ಸಂವಿಧಾನದ ಭಾಗವಾಗಿರಲಿಲ್ಲ ಎಂದು ಹೇಳಿಕೆ ನೀಡಿದ ಸಂದರ್ಭದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಅವರು ಈ ಮಾತುಗಳನ್ನು ಹೇಳಿದ್ದಾರೆ.
ದೇಶಕ್ಕೆ ತುರ್ತು ಪರಿಸ್ಥಿತಿ ಘೋಷಿಸಿ 50 ವರ್ಷಗಳಾದ ಸಂದರ್ಭದಲ್ಲಿ ಮೊನ್ನೆ ಗುರುವಾರ ದೆಹಲಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ, ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನದ ಪೀಠಿಕೆಯಲ್ಲಿ ಈ ಪದಗಳು ಇರಲಿಲ್ಲ. ತುರ್ತು ಪರಿಸ್ಥಿತಿಯ ಸಮಯದಲ್ಲಿ, ಮೂಲಭೂತ ಹಕ್ಕುಗಳನ್ನು ಕಸಿದುಕೊಂಡಾಗ, ಸಂಸತ್ತು ಕೆಲಸ ಮಾಡಲಿಲ್ಲ, ನ್ಯಾಯಾಂಗ ಕೆಲಸಗಳು ಸ್ಥಗಿತವಾದವು, ನಂತರ ಈ ಪದಗಳನ್ನು ಸೇರಿಸಲಾಯಿತು ಎಂದು ಹೇಳಿದ್ದರು.
ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ವಾರಣಾಸಿಯಲ್ಲಿ ನಿನ್ನೆ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತ ದೇಶಕ್ಕೆ ಸಮಾಜವಾದದ ಅಗತ್ಯವಿಲ್ಲ. ಜಾತ್ಯತೀತತೆಯು ನಮ್ಮ ಸಂಸ್ಕೃತಿಯ ತಿರುಳಲ್ಲ, ಅದಕ್ಕಾಗಿಯೇ ಇದನ್ನು ಪರಿಗಣಿಸಬೇಕು ಎಂದಿದ್ದಾರೆ.
ಸಂವಿಧಾನದ ಪೀಠಿಕೆಯಲ್ಲಿ ಸಮಾಜವಾದಿ ಮತ್ತು ಜಾತ್ಯತೀತ ಪದಗಳನ್ನು ಪರಿಶೀಲಿಸಬೇಕೆಂಬ ಆರ್‌ಎಸ್‌ಎಸ್ ಕರೆಗೆ ಪರೋಕ್ಷ ಬೆಂಬಲವಾಗಿ, ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಪ್ರತಿಕ್ರಿಯೆ ನೀಡಿ, ಯಾವುದೇ ಸರಿಯಾದ ಚಿಂತನೆಯ ನಾಗರಿಕರು ಅದನ್ನು ಅನುಮೋದಿಸುತ್ತಾರೆ ಏಕೆಂದರೆ ಈ ಪದಗಳು ಡಾ. ಭೀಮ್ ರಾವ್ ಅಂಬೇಡ್ಕರ್ ಬರೆದ ಮೂಲ ಸಂವಿಧಾನದ ಭಾಗವಾಗಿರಲಿಲ್ಲ ಎಂದು ಎಲ್ಲರಿಗೂ ತಿಳಿದಿದೆ ಎಂದು ಹೇಳಿದ್ದಾರೆ.
ತುರ್ತು ಪರಿಸ್ಥಿತಿಯ ದಿನಗಳನ್ನು ನೆನಪಿಸಿಕೊಂಡ ಚೌಹಾಣ್, ತಮ್ಮ ಅಧಿಕಾರವನ್ನು ಉಳಿಸಿಕೊಳ್ಳುವ ಸಲುವಾಗಿ, ಅಂದಿನ ಪ್ರಧಾನಿ ಇಂದಿರಾ ಗಾಂಧಿ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಿದರು ಎಂದು ಹೇಳಿದರು.
ಬಾಹ್ಯ ಭದ್ರತೆಗೆ ಅಥವಾ ಆಂತರಿಕ ಭದ್ರತೆಗೆ ಯಾವುದೇ ಬೆದರಿಕೆ ಇರಲಿಲ್ಲ. ಪ್ರಧಾನಿ ಕುರ್ಚಿಗೆ ಮಾತ್ರ ಬೆದರಿಕೆ ಇತ್ತು, ಆದ್ದರಿಂದ, ಜೂನ್ 25, 1975 ರ ರಾತ್ರಿ, ಸಂಪುಟ ಸಭೆ ನಡೆಸದೆಯೇ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಯಿತು ಎಂದರು.
ತುರ್ತು ಪರಿಸ್ಥಿತಿ ಘೋಷಿಸಿದಾಗ ನನಗೆ ಕೇವಲ 16 ವರ್ಷ ವಯಸ್ಸಾಗಿತ್ತು, ಭಾರತದ ರಕ್ಷಣಾ ನಿಯಮಗಳ ಅಡಿಯಲ್ಲಿ ನನ್ನನ್ನು ಜೈಲಿಗೆ ಹಾಕಲಾಗಿತ್ತು ಎಂದು ಚೌಹಾಣ್ ಹೇಳಿದರು.
ಇಂದಿಗೂ, ಆ ಕರಾಳ ದಿನಗಳನ್ನು ನೆನಪಿಸಿಕೊಳ್ಳುವಾಗ ನನಗೆ ಮೂಕವಿಸ್ಮಿತವಾಗುತ್ತದೆ. ತುರ್ತು ಪರಿಸ್ಥಿತಿಯ ಸಮಯದಲ್ಲಿ, ಯಾರಾದರೂ ಪ್ರತಿಭಟಿಸಿದರೆ, ಅವರ ಮೇಲೆ ಗುಂಡು ಹಾರಿಸಲಾಗುತ್ತಿತ್ತು. ಇದು ಸಾರ್ವಜನಿಕರ ಮೇಲೆ ಗುಂಡು ಹಾರಿಸಿದ್ದಲ್ಲ, ಇದು ಸಂವಿಧಾನದ ಕೊಲೆ" ಎಂದು ಚೌಹಾಣ್ ನೆನಪಿಸಿಕೊಂಡರು.
ಸಂವಿಧಾನದ ಪೀಠಿಕೆಯಲ್ಲಿರುವ 'ಸಮಾಜವಾದಿ' ಮತ್ತು 'ಜಾತ್ಯತೀತ' ಪದಗಳನ್ನು ತೆಗೆದುಹಾಕಬಹುದು ಎಂಬ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಹೇಳಿಕೆಯನ್ನು ಸಮಾಜವಾದಿ ಪಕ್ಷದ (ಎಸ್‌ಪಿ) ಹಿರಿಯ ನಾಯಕ ರಾಜೇಂದ್ರ ಚೌಧರಿ ಟೀಕಿಸಿದರು.
ಈ ಹೇಳಿಕೆಗಳು ಆರ್‌ಎಸ್‌ಎಸ್ ಮತ್ತು ಬಿಜೆಪಿ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಡುವುದಿಲ್ಲ ಮತ್ತು ಸಂವಿಧಾನವನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿವೆ ಎಂಬುದನ್ನು ಸಾಬೀತುಪಡಿಸುತ್ತವೆ ಎಂದು ಚೌಧರಿ ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡುತ್ತಾ ಹೇಳಿದರು.
ಯುಪಿ ಕಾಂಗ್ರೆಸ್ ಮುಖ್ಯಸ್ಥ ಅಜಯ್ ರೈ ಪಿಟಿಐ ಜೊತೆ ಮಾತನಾಡುತ್ತಾ, ವಾಸ್ತವದಲ್ಲಿ ಇಂತಹ ಹೇಳಿಕೆಗಳು ಆರ್‌ಎಸ್‌ಎಸ್ ಮತ್ತು ಬಿಜೆಪಿಗೆ ಸಂವಿಧಾನದಲ್ಲಿ ನಂಬಿಕೆ ಇಲ್ಲ ಎಂದು ನಾವು ಬಹಳ ದಿನಗಳಿಂದ ಹೇಳುತ್ತಿರುವುದನ್ನು ದೃಢಪಡಿಸುತ್ತವೆ. ಈ ದೇಶ ಎಲ್ಲರಿಗೂ ಸೇರಿದೆ. ಕಾಂಗ್ರೆಸ್ ಯಾವುದೇ ಬೆಲೆ ತೆತ್ತಾದರೂ ಸಂವಿಧಾನವನ್ನು ರಕ್ಷಿಸುತ್ತದೆ ಎಂದರು.