ಪಾಟ್ನಾ: ಮಾನ್ಸೂನ್ ಮಾರುತಗಳು ದೇಶಾದ್ಯಂತ ವ್ಯಾಪಕ ಮಳೆಗೆ ಕಾರಣವಾಗಿದ್ದು, ದೇಶದ ಹಲವು ಭಾಗಗಳಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಈ ನಡುವೆ ಬಿಹಾರದ ಜಲಪಾತವೊಂದರಲ್ಲಿ ಪ್ರವಾಸಕ್ಕೆ ಹೋಗಿದ್ದ ಮಹಿಳೆಯರ ಗುಂಪು ನೀರಿನಲ್ಲಿ ಕೊಚ್ಚಿ ಹೋದ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ.
ಹೌದು.. ಮಳೆಗಾಲದಲ್ಲಿ ಜಲಪಾತ,ಪ್ರಕೃತಿ ಸೌಂದರ್ಯ ಆಸ್ವಾದಿಸಲು ತೆರಳುವ ಪ್ರವಾಸಿಗರು ಅತೀವ ಎಚ್ಚರಿಕೆಯಿಂದ ಇರುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ಕಾರಣ ಜಲಪಾತ ವೀಕ್ಷಿಸಲು ತೆರಳಿದ್ದ 6 ಯುವತಿಯರ ಏಕಾಏಕಿ ನೀರು ಹೆಚ್ಚಾಗಿ ಕೊಚ್ಚಿ ಹೋದ ಘಟನೆ ನಡೆದಿದೆ. ಇನ್ನೇನು ಜಲಪಾತದ ಅಂಚಿನಿಂದ ಪ್ರಪಾತಕ್ಕೆ ಬೀಳಬೇಕು ಅನ್ನುವಷ್ಟರಲ್ಲೇ ಸ್ಥಳೀಯರು ಯುವತಿಯರನ್ನು ರಕ್ಷಿಸಿದ್ದಾರೆ. ಈ ರೋಚಕ ವಿಡಿಯೋ ವೈರಲ್ ಆಗಿದೆ.
ಬಿಹಾರದ ಗಯಾ ಜಿಲ್ಲೆಯಲ್ಲಿರುವ ಲಂಗುರಿಯಾ ಬೆಟ್ಟದ ಜಲಪಾತದ ಬಳಿ ಈ ಘಟನೆ ನಡೆದಿದ್ದು, ನೀರಿನಲ್ಲಿ ಆಟವಾಡುತ್ತಿರುವಾಗ ಜಲಪಾತದಲ್ಲಿ ನೀರು ದಿಢೀರ್ ಉಕ್ಕಿ ಹರಿದಿದೆ.
ನೀರಿನ ವೇಗ ಅರಿತ ಇತರೆ ಪುರುಷ ಪ್ರವಾಸಿಗರು ಕೂಡಲೇ ನೀರಿನಿಂದ ಹೊರ ಬಂದರೆ ಮಹಿಳೆಯರು ಮಾತ್ರ ನೀರಿನಿಂದ ಹೊರ ಬರಲಾಗದ ಪರಿತಪಿಸಿದ್ದಾರೆ. ನೋಡ ನೋಡುತ್ತಲೇ ನೀರು ಹೆಚ್ಚಾಗಿದೆ.
ನೀರಿನಲ್ಲಿ ಕೊಚ್ಚಿ ಹೋದ ಯುವತಿಯರು
ಇನ್ನು ನೀರು ಏಕಾಏಕಿ ಉಕ್ಕಿ ಹರಿಯುತ್ತಲೇ ನೀರಿನ ಹೊಡೆತಕ್ಕೆ ಸಿಲುಕಿ ಮಹಿಳೆಯರು ಕೊಚ್ಚಿ ಹೋಗಿದ್ದಾರೆ. ಈ ವೇಳೆ ಅಲ್ಲಿಯೇ ಇದ್ದ ಪುರುಷ ಪ್ರವಾಸಿಗರು ಮಹಿಳೆಯರ ರಕ್ಷಣೆಗೆ ಧಾವಿಸಿದ್ದಾರೆ. ಪರಸ್ಪರ ಒಬ್ಬರಿಗೊಬ್ಬರು ಕೈ ನೀಡಿ ಮಹಿಳೆಯರನ್ನು ಹಿಡಿದುಕೊಂಡಿದ್ದಾರೆ. ಇನ್ನೇನು ಮಹಿಳೆಯರು ಪ್ರಪಾತಕ್ಕೆ ಬೀಳುತ್ತಾರೆ ಎನ್ನುವಾಗಲೇ ಪುರುಷರು ಅವರನ್ನು ಹಿಡಿದು ಎಳೆದುಕೊಂಡಿದ್ದಾರೆ.
ಬದುಕಿದ್ದೇ ಪವಾಡ
ಜಲಪಾತದಲ್ಲಿ ದಿಢೀರ್ ನೀರು ಹೆಚ್ಚಾದ ಕಾರಣ ಯುವತಿಯರು ಆತಂಕಗೊಂಡಿದ್ದಾರೆ. ಇತ್ತ ದಡ ಸೇರುವುದು ಅಸಾಧ್ಯವಾಗಿತ್ತು. ಈ ವೇಳೆ ಓರ್ವ ಯುವತಿ ಕಲ್ಲಿನಿಂದ ಕಲ್ಲಿಗೆ ಹಾರಿದ್ದಾಳೆ. ಆದರೆ ಇದೇ ರೀತಿ ಮತ್ತೆ ಮೂವರು ಯುವತಿಯರು ಕಲ್ಲಿನಿಂದ ಜಿಗಿಯಲು ಪ್ರಯತ್ನಿಸಿದ್ದಾರೆ. ಆದರೆ ಸಾಧ್ಯವಾಗಿಲ್ಲ. ಕಾರಣ ನೀರಿನ ಮಟ್ಟ ಹೆಚ್ಚಾಗುತ್ತಿದ್ದಂತೆ ಕೊಚ್ಚಿ ಹೋಗಿದ್ದಾರೆ. ಭಾರಿ ರಭಸದ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಈ ಮೂವರು ಯುವತಿಯರು ಜಲಪಾತದ ಬಳಿ ತಲುಪಿದ್ದಾರೆ.
ಕೆಲವೇ ಮೀಟರ್ ದೂರದಲ್ಲಿ ಜಲಪಾತ ಪ್ರಪಾತಕ್ಕೆ ಧುಮುಕಲಿದ್ದು, ಇದಕ್ಕೂ ಮೊದಲೇ ಸ್ಥಳೀಯರು ಅವರನ್ನು ಹಿಡಿದು ರಕ್ಷಿಸಿದ್ದಾರೆ. 5ನೇ ಯುವತಿಯನ್ನು ನದಿಯ ಮತ್ತೊಂದು ಬದಿಯಿಂದ ರಕ್ಷಿಸಲಾಗಿದೆ. ಇದೇ ವೇಳೆ 6ನೇ ಯುವತಿ ಕಲ್ಲನ್ನು ಗಟ್ಟಿಯಾಗಿ ಹಿಡಿದು ನಿಂತಿದ್ದಾಳೆ. ನೀರಿನ ರಭಸ ಹೆಚ್ಚಾದ ಕಾರಣ ಸ್ಥಳೀಯರು ಕೆಲ ನಿಮಿಷಗಳ ಕಾರ್ಯಾಚರಣೆ ನಡೆಸಿ 6ನೇ ಯುವತಿಯನ್ನು ರಕ್ಷಿಸಿದ್ದಾರೆ. ಈ ಮೂಲಕ 6 ಯುವತಿಯರ ಪ್ರಾಣ ಉಳಿದಿದೆ. ಯುವತಿಯರು ನೀರಿನಲ್ಲಿ ಕೊಚ್ಚಿ ಹೋಗುತ್ತಿರುವ ಹಾಗೂ ರಕ್ಷಣೆ ಮಾಡುತ್ತಿರುವ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ರಕ್ಷಣೆಯ ಸಂದರ್ಭದಲ್ಲಿ ಬಂಡೆಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಗಾಯಗೊಂಡಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರತ್ಯಕ್ಷದರ್ಶಿಗಳ ಹೇಳಿಕೆ ಪ್ರಕಾರ, ಈ ಆರು ಮಂದಿ ಮಹಿಳೆಯರು ಪ್ರಾಣಾಪಾಯದಿಂದ ಪಾರಾಗಿದ್ದು ಪವಾಡ ಸದೃಶ. ಯಾಕೆಂದರೆ ಸ್ವಲ್ಪ ಹೆಚ್ಚು ಕಡಿಮೆ ಆಗಿದ್ದರೂ ಇವರೆಲ್ಲ ಆಳವಾದ ಪ್ರಪಾತಕ್ಕೆ ಬೀಳುತ್ತಿದ್ದರು ಎಂದು ತಿಳಿಸಿದ್ದಾರೆ.
ಮಾನ್ಸೂನ್ ಆರಂಭವಾಗುತ್ತಿದ್ದಂತೆಯೇ ದೇಶಾದ್ಯಂತ ಭಾರಿ ಮಳೆಯಾಗುತ್ತಿದ್ದು, ದೇಶದ ಬಹುತೇಕ ಎಲ್ಲ ಜಲಪಾತಗಳು ಧುಮಿಕ್ಕಿ ಹರಿಯುತ್ತಿವೆ. ಹೀಗಾಗಿ ಈ ನಯನ ಮನೋಹರ ದೃಶ್ಯ ತುಂಬಿಕೊಳ್ಳಲು ಜಲಪಾತಗಳಿಗೆ ಪ್ರವಾಸಿಗರು ಅಪಾರ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ಹೀಗೆ ಭೇಟಿ ನೀಡಿದವರು ನೀರಿಗಿಳಿದು ಅಪಾಯ ತಂದೊಡ್ಡುಕೊಳ್ಳುತ್ತಾರೆ.