ಲಖನೌ: ಮಹತ್ವದ ಬೆಳವಣಿಗೆಯಲ್ಲಿ ಉತ್ತರ ಪ್ರದೇಶ ಮಾಜಿ ಸಿಎಂ ಹಾಗೂ ಬಿಎಸ್ ಪಿ ಪಕ್ಷದ ಅಧಿನಾಯಕಿ ಮಾಯಾವತಿ ಪಕ್ಷದ ಎಲ್ಲ ಹುದ್ದೆಗಳಿಂದ ಅವರ ಸೋದರಳಿಯ ಆಕಾಶ್ ಆನಂದ್ ಅವರನ್ನು ವಜಾಗೊಳಿಸಿದ್ದಾರೆ.
ಹೌದು.. ಬಹುಜನ ಸಮಾಜವಾದಿ ಪಕ್ಷ (ಬಿಎಸ್‌ಪಿ) ಮುಖ್ಯಸ್ಥೆ ಮಾಯಾವತಿ ಭಾನುವಾರ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದ್ದು, ಮುಂಬರುವ ಚುನಾವಣೆಗಳು, ಪಕ್ಷ ಸಂಘಟನೆಯ ಹಿನ್ನಲೆಯಲ್ಲಿ ಅವರು ಹಲವಾರು ಘೋಷಣೆಗಳನ್ನು ಮಾಡಿದ್ದಾರೆ. ಸೋದರಳಿಯ ಆಕಾಶ್ ಆನಂದ್ ಅವರನ್ನು ಪಕ್ಷದ ಎಲ್ಲಾ ಹುದ್ದೆಗಳಿಂದ ವಜಾಗೊಳಿಸಿದ್ದು, ಮಾಯಾವತಿ ನಿರ್ಧಾರ ಪಕ್ಷದಲ್ಲಿ ಸಂಚಲನವನ್ನು ಉಂಟು ಮಾಡಿದೆ. ಪಕ್ಷವೇ ಸರ್ವಶ್ರೇಷ್ಠವಾಗಿದ್ದು, ಸಂಬಂಧಗಳು ನಂತರ ಬರಬಹುದು ಎಂದು ಮಾಯಾವತಿ ಹೇಳಿಕೆ ನೀಡಿದ್ದಾರೆ.
ಅಂದಹಾಗೆ ಕಳೆದ ವರ್ಷ ಆಕಾಶ್ ಆನಂದ್ ಅವರನ್ನು ರಾಜಕೀಯ ಉತ್ತರಾಧಿಕಾರಿ ಎಂದು ಹೇಳಲಾಗಿತ್ತು. ಬಿಎಸ್‌ಪಿ ನಾಯಕತ್ವದಲ್ಲಿನ ಮಹತ್ವದ ಬದಲಾವಣೆಗಳ ಕುರಿತು ದೇಶಾದ್ಯಂತದ ಪಕ್ಷದ ಪದಾಧಿಕಾರಿಗಳ ಉನ್ನತ ಮಟ್ಟದ ಸಭೆಯಲ್ಲಿ ಘೋಷಣೆ ಮಾಡಲಾಗಿದ್ದು, ಮಾಯಾವತಿ ಅವರು ತಮ್ಮ ಸಹೋದರ ಆನಂದ್ ಕುಮಾರ್ ಮತ್ತು ರಾಮ್‌ಜಿ ಗೌತಮ್ ಅವರನ್ನು ರಾಷ್ಟ್ರೀಯ ಸಂಯೋಜಕರಾಗಿ ನೇಮಿಸಿದ್ದಾರೆ.
ಬಿಎಸ್‌ಪಿ ಚುನಾವಣೆಯಲ್ಲಿ ಸ್ಪರ್ಧಿಸದಿದ್ದರೂ ಮಿಲ್ಕಿಪುರ ವಿಧಾನಸಭಾ ಉಪಚುನಾವಣೆಯಲ್ಲಿ ಪಕ್ಷವು ಹೀನಾಯ ಸೋಲನ್ನು ಅನುಭವಿಸಿದೆ ಮತ್ತು ಅದರ ಸೋಲಿಗೆ ಈಗ ಎಸ್‌ಪಿ ಯಾರನ್ನು ದೂಷಿಸುತ್ತದೆ. ಎಸ್‌ಪಿ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು. ಅಂಬೇಡ್ಕರ್‌ವಾಡಿ ನೀತಿಯಿಂದ ಬಿಜೆಪಿ ಮತ್ತು ಇತರ ಜಾತಿವಾದಿ ಪಕ್ಷಗಳನ್ನು ಸೋಲಿಸಲು ಬಿಎಸ್‌ಪಿಯಿಂದ ಮಾತ್ರ ಸಾಧ್ಯ ಎಂದು ಮಾಯಾವತಿ ಹೇಳಿದರು.
ನಾನು ಬದುಕಿರುವವರೆಗೂ ಉತ್ತರಾಧಿಕಾರಿ ಘೋಷಿಸಲ್ಲ
ಭಾನುವಾರ ಲಕ್ನೋದಲ್ಲಿ ಬಹುಜನ ಸಮಾಜವಾದಿ ಪಕ್ಷದ ಅಖಿಲ ಭಾರತ ಮಟ್ಟದ ಸಭೆ ನಡೆಯುತ್ತಿದ್ದು, ಈ ಸಭೆಯಲ್ಲಿ ಪಕ್ಷದ ವರಿಷ್ಠೆ ಮಾಯಾವತಿ ಹಲವು ತೀರ್ಮಾನವನ್ನು ಪ್ರಕಟಿಸಿದ್ದಾರೆ. "ತಾವು ಬದುಕಿರುವ ತನಕ ಪಕ್ಷದಲ್ಲಿ ಯಾರೂ ಸಹ ತಮ್ಮ ಉತ್ತರಾಧಿಕಾರಿಯಾಗುವುದಿಲ್ಲ" ಎಂದು ಘೋಷಣೆ ಮಾಡಿದ್ದಾರೆ. ಬಿಎಸ್‌ಪಿ ಪಕ್ಷಕ್ಕೆ ಮಯಾವತಿ ಬಳಿಕ ಸೋದರಳಿಯ ಆಕಾಶ್ ಆನಂದ್ ಉತ್ತರಾಧಿಕಾರಿ ಎಂಬ ಸುದ್ದಿಗಳು ಹಬ್ಬಿದ್ದವು. ಆದರೆ ಭಾನುವಾರ ಮಾಯಾವತಿ ಸೋದರಳಿಯ ಆಕಾಶ್ ಆನಂದ್ ಅವರನ್ನು ಬಿಎಸ್‌ಪಿ ರಾಷ್ಟ್ರೀಯ ಸಂಯೋಜಕ ಸೇರಿದಂತೆ ಪಕ್ಷದ ಎಲ್ಲಾ ಹುದ್ದೆಗಳಿಂದ ವಜಾಗೊಳಿಸಿದ್ದಾರೆ.a
ಪ್ರಭಾವವನ್ನು ಬೀರುತ್ತಿದ್ದಾರೆ
ಫೆಬ್ರವರಿಯಲ್ಲಿ ಗುಂಪುಗಾರಿಕೆ ಮತ್ತು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಕೊಂಡ ಆರೋಪದ ಮೇಲೆ ಆಕಾಶ್ ಆನಂದ್ ಅವರ ಮಾವ ಅಶೋಕ್ ಸಿದ್ದಾರ್ಥ್ ಅವರನ್ನು ಬಿಎಸ್‌ಪಿ ಪಕ್ಷದಿಂದ ಮಾಯಾವತಿ ಉಚ್ಛಾಟಿಸಿದ್ದರು. ಈಗ ಸೋದರಳಿಯ ಆಕಾಶ್ ಆನಂದ್ ಅವರನ್ನು ಪಕ್ಷದ ಎಲ್ಲಾ ಹುದ್ದೆಗಳಿಂದ ವಜಾಗೊಳಿಸಲಾಗಿದೆ. "ಆಕಾಶ್ ಆನಂದ್ ರಾಜಕೀಯ ಜೀವನದ ಮೇಲೆ ಅಶೋಕ್ ಸಿದ್ದಾರ್ಥ್ ಪ್ರಭಾವ ಬೀರಿದ್ದಾರೆ. ಆಕಾಶ್ ಆನಂದ್ ಪತ್ನಿ ಪ್ರಜ್ಞಾ ಮೂಲಕ ಅಶೋಕ್ ಸಿದ್ದಾರ್ಥ್ ಪ್ರಭಾವನ್ನು ಉಂಟು ಮಾಡುತ್ತಿದ್ದಾರೆ" ಎಂದು ಮಾಯಾವತಿ ಹೇಳಿದ್ದಾರೆ.