ಕೇಂದ್ರ ಸಚಿವೆ ರಕ್ಷಾ ಖಾಡ್ಸೆ 
ದೇಶ

ಕೇಂದ್ರ ಸಚಿವೆ ರಕ್ಷಾ ಖಾಡ್ಸೆ ಪುತ್ರಿಗೆ ಯುವಕರ ಗುಂಪಿನಿಂದ ಕಿರುಕುಳ: ದೂರು ದಾಖಲು

ಆರೋಪಿಗಳು ರಾಜಕೀಯ ಪಕ್ಷವೊಂದಕ್ಕೆ ಸೇರಿದವರಾಗಿದ್ದು, ಕೆಲವರನ್ನು ಬಂಧಿಸಲಾಗಿದೆ ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.

ಜಲಗಾಂವ್: ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಯುವಕರ ಗುಂಪೊಂದು ತನ್ನ ಮಗಳು ಮತ್ತು ಆಕೆಯ ಸ್ನೇಹಿತೆಯರಿಗೆ ಕಿರುಕುಳ ನೀಡಿದ ಬಗ್ಗೆ ಕೇಂದ್ರ ಸಚಿವೆ ರಕ್ಷಾ ಖಾಡ್ಸೆ ಭಾನುವಾರ ಪೊಲೀಸರಿಗೆ ದೂರು ದಾಖಲಿಸಿದ್ದಾರೆ.

ಆರೋಪಿಗಳು ರಾಜಕೀಯ ಪಕ್ಷವೊಂದಕ್ಕೆ ಸೇರಿದವರಾಗಿದ್ದು, ಕೆಲವರನ್ನು ಬಂಧಿಸಲಾಗಿದೆ ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.

ಶುಕ್ರವಾರ ರಾತ್ರಿ ಮುಕ್ತೈನಗರದ ಕೊಥಲಿ ಗ್ರಾಮದ ಸಂತ ಮುಕ್ತಾಯಿ ಯಾತ್ರೆಯಲ್ಲಿ ಸಂಭವಿಸಿದ ಘಟನೆಗೆ ಸಂಬಂಧಿಸಿದಂತೆ ಖಾಡ್ಸೆ ಅವರು ಮುಕ್ತೈನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವೆ, 'ನಾನು ಗುಜರಾತ್‌ನಲ್ಲಿದ್ದೇನೆ. ಕಾರ್ಯಕ್ರಮಕ್ಕೆ ಹೋಗಲು ನನ್ನ ಮಗಳು ಅನುಮತಿ ಕೇಳಿದಳು. ಹೀಗಾಗಿ, ನಾನು ಆಕೆಯನ್ನು ಕಾವಲುಗಾರ ಮತ್ತು ಇನ್ನಿಬ್ಬರು ಸಿಬ್ಬಂದಿಯನ್ನು ಕರೆದುಕೊಂಡು ಹೋಗುವಂತೆ ಹೇಳಿದೆ. ಕಾರ್ಯಕ್ರಮದಲ್ಲಿ ನನ್ನ ಮಗಳು ಮತ್ತು ಆಕೆಯ ಸ್ನೇಹಿತೆಯರನ್ನು ಹಿಂಬಾಲಿಸಿ, ಭದ್ರತಾ ಸಿಬ್ಬಂದಿಯನ್ನು ತಳ್ಳಲಾಗಿದೆ. ಅವರ ಫೋಟೊ ಮತ್ತು ವಿಡಿಯೋಗಳನ್ನು ತೆಗೆದುಕೊಳ್ಳಲಾಗಿದೆ. ಇದಕ್ಕೆ ನನ್ನ ಸಿಬ್ಬಂದಿ ಆಕ್ಷೇಪಿಸಿದಾಗ ಹುಡುಗರು ಅಶಿಸ್ತಿನ ವರ್ತನೆ ತೋರಿದ್ದಾರೆ ಮತ್ತು 30 ರಿಂದ 40 ಜನರ ಗುಂಪು ಸೇರಿದೆ' ಎಂದು ತಿಳಿಸಿದರು.

ಇಂದು ಬೆಳಿಗ್ಗೆ ಮನೆಗೆ ಹಿಂದಿರುಗಿದಾಗ, ಫೆಬ್ರುವರಿ 24 ರಂದು ಕೂಡ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಅದೇ ಹುಡುಗರ ಗುಂಪು ತನ್ನೊಂದಿಗೆ ಅನುಚಿತವಾಗಿ ವರ್ತಿಸಿತ್ತು ಎಂದು ನನ್ನ ಮಗಳು ಹೇಳಿದಳು.ಇದು ದುರದೃಷ್ಟಕರ, ಸಂಸದೆ ಅಥವಾ ಕೇಂದ್ರ ಸಚಿವರ ಮಗಳಿಗೆ ಇಂತಹ ಘಟನೆಗಳು ಸಂಭವಿಸಿದರೆ, ಸಾಮಾನ್ಯ ಜನರ ಗತಿಯೇನು? ಎಂದು ಖಡ್ಸೆ ಹೇಳಿದರು.

'ಆ ಯುವಕರ ಗುಂಪು ಶಾಲೆಗೆ ಹೋಗುವಾಗ ಹುಡುಗಿಯರಿಗೆ ಕಿರುಕುಳ ನೀಡುತ್ತಾರೆ ಎಂದು ಮುಕ್ತೈನಗರದ ಕೆಲವು ಸ್ಥಳೀಯರು ಹೇಳಿದ್ದರು. ಮುಖ್ಯಮಂತ್ರಿ ಹಾಗೂ ಪೊಲೀಸ್ ಉಪಾಧೀಕ್ಷಕರೊಂದಿಗೆ ಮಾತನಾಡಿದ್ದೇನೆ. ಶೀಘ್ರವೇ ತಪ್ಪಿತಸ್ಥರನ್ನು ಬಂಧಿಸಬೇಕು' ಎಂದು ಒತ್ತಾಯಿಸಿದರು.

ರಾಯಗಢದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಫಡ್ನವೀಸ್, 'ಖಾಡ್ಸೆ ಅವರ ಮಗಳಿಗೆ ಕಿರುಕುಳ ನೀಡಿದವರು ರಾಜಕೀಯ ಪಕ್ಷವೊಂದಕ್ಕೆ ಸೇರಿದವರಾಗಿದ್ದಾರೆ. ಸ್ಥಳೀಯ ಪೊಲೀಸರು ಕೆಲವರನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು' ಎಂದು ಹೇಳಿದರು.

ಈ ಬೆಳವಣಿಗೆಗೆ ಪ್ರತಿಕ್ರಿಯಿಸಿದ ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ ಹರ್ಷವರ್ಧನ್ ಸಕ್ಪಾಲ್, ಮಹಾಯುತಿ ಸರ್ಕಾರದ ಅಡಿಯಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕೇಂದ್ರ ಸಚಿವೆ ಖಾಡ್ಸೆ ಅವರ ಮಗಳಿಗೆ ಪುಂಡರು ಕಿರುಕುಳ ನೀಡಿ, ಭದ್ರತಾ ಸಿಬ್ಬಂದಿಯನ್ನು ತಳ್ಳಿದ ಘಟನೆ ಅತ್ಯಂತ ಕಳವಳಕಾರಿಯಾಗಿದ್ದು, ರಾಜ್ಯದಲ್ಲಿ ಮಹಿಳೆಯರು ಮತ್ತು ಹೆಣ್ಣುಮಕ್ಕಳು ಸುರಕ್ಷಿತವಾಗಿಲ್ಲ ಎಂಬುದನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.

ತನ್ನ ಮಗಳು ಮತ್ತು ಆಕೆಯ ಸ್ನೇಹಿತೆಯರಿಗೆ ಕಿರುಕುಳ ನೀಡಿದ ವ್ಯಕ್ತಿಗಳನ್ನು ಬಂಧಿಸದ ಕಾರಣ ಖಾಡ್ಸೆ ಪೊಲೀಸ್ ಠಾಣೆಯಲ್ಲಿ ಕುಳಿತಿದ್ದಾರೆ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

2nd test, Day 2: 518 ರನ್ ಗಳಿಗೆ ಭಾರತ ಇನ್ನಿಂಗ್ಸ್ ಡಿಕ್ಲೇರ್!

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

2nd test, Day 2: 2ನೇ ದಿನದಾಟದ ಆರಂಭದಲ್ಲೇ ಭಾರತಕ್ಕೆ ಆಘಾತ, ಭೋಜನ ವಿರಾಮದ ವೇಳೆಗೆ 427/4

SCROLL FOR NEXT