ನವದೆಹಲಿ: ವಿಚ್ಛೇದನ ಪಡೆಯಲು ಮುಂದಾಗಿದ್ದ ದಂಪತಿಯ ನಡುವೆ ಮಧ್ಯಸ್ಥಿಕೆ ವಹಿಸಿದ ನ್ಯಾಯಾಧೀಶರೊಬ್ಬರು ಮಹಿಳೆಯನ್ನು ಪ್ರಶ್ನಿಸಿರುವ ಪರಿಗೆ ವಿರೋಧ ವ್ಯಕ್ತವಾಗಿದೆ. ಸಾಂಸ್ಕೃತಿಕ ರೂಢಿಗಳ ಆಧಾರದ ಮೇಲೆ ಹೆಂಡತಿಯನ್ನು ಟೀಕಿಸುವ ಅಥವಾ ಮೌಲ್ಯವನ್ನು ಕಡಿಮೆ ಮಾಡುವ ಪ್ರಯತ್ನವಾಗಿದ್ದು, ಕಾನೂನು ವ್ಯವಸ್ಥೆಯಲ್ಲಿ ಈ ರೀತಿಯ ಮನಸ್ಥಿತಿ ಸೂಕ್ತವಲ್ಲ ಎನ್ನಲಾಗಿದೆ.
ಮಧ್ಯಸ್ಥಿಕೆ ನಡೆಸುತ್ತಿದ್ದ ಸೆಷನ್ಸ್ ನ್ಯಾಯಾಧೀಶರೊಬ್ಬರು 'ಬಿಂದಿ' ಅಥವಾ 'ಮಂಗಳಸೂತ್ರ' ಧರಿಸಿಲ್ಲದ ಕಾರಣಕ್ಕೆ ಅವರ ಪತಿಗೆ ಅವರ ಮೇಲೆ ಆಸಕ್ತಿ ಏಕಿರಬೇಕು ಎಂದು ಮಹಿಳೆಯನ್ನು ಪ್ರಶ್ನಿಸಿದ್ದಾರೆ.
ಪುಣೆ ಮೂಲದ ವಕೀಲ ಅಂಕುರ್ ಆರ್ ಜಹಗೀರ್ದಾರ್ ಲಿಂಕ್ಡ್‌ಇನ್ ಪೋಸ್ಟ್‌ನಲ್ಲಿ, ದಂಪತಿ ಕೌಟುಂಬಿಕ ಕಲಹದಿಂದಾಗಿ ಮಧ್ಯಸ್ಥಿಕೆಗಾಗಿ ನ್ಯಾಯಾಧೀಶರ ಮುಂದೆ ಹಾಜರಾಗಿದ್ದರು. ವಿವಾದವನ್ನು ಸೌಹಾರ್ದಯುತವಾಗಿ ಪರಿಹರಿಸಲು ಪ್ರಯತ್ನಿಸುತ್ತಿದ್ದ ನ್ಯಾಯಾಧೀಶರು, 'ನೀವು ಮಂಗಳಸೂತ್ರ ಮತ್ತು ಬಿಂದಿ ಧರಿಸಿಲ್ಲ ಎಂಬುದನ್ನು ನಾನು ನೋಡಿದ್ದೇನೆ. ನೀವು ವಿವಾಹಿತ ಮಹಿಳೆಯಂತೆ ವರ್ತಿಸದಿದ್ದರೆ, ನಿಮ್ಮ ಪತಿ ನಿಮ್ಮ ಬಗ್ಗೆ ಏಕೆ ಆಸಕ್ತಿ ತೋರಿಸುತ್ತಾನೆ?' ಮಹಿಳೆಯನ್ನು ಪ್ರಶ್ನಿಸಿದ್ದಾರೆ ಎಂದು ಹೇಳಿದ್ದಾರೆ.
ನ್ಯಾಯಾಧೀಶರ ಇಂತಹ ಅನುಚಿತ ಹೇಳಿಕೆಗಳ ಬಗ್ಗೆ ದೂರು ನೀಡಲು ಯಾವುದೇ ಮಾರ್ಗ ಇಲ್ಲದಿರುವುದು ನಿರಾಶಾದಾಯಕ ಸಂಗತಿಯಾಗಿದೆ. ಜಿಲ್ಲಾ ನ್ಯಾಯಾಲಯಗಳಲ್ಲಿ ನಡೆಯುವ ಅನೇಕ ಅನುಚಿತ ನಡವಳಿಕೆಗಳು ಯಾವುದೇ ತರ್ಕಬದ್ಧ ಮತ್ತು ವಿದ್ಯಾವಂತ ವ್ಯಕ್ತಿಗೆ ಆಘಾತಕಾರಿ ಎನಿಸುತ್ತವೆ. ಆದರೆ, ನಮ್ಮ ಸಮಾಜವು ಕೆಲವು ಅತಿರೇಕದ ವಿಷಯಗಳಿಗೆ ಮೂಲಭೂತ ಸಹಿಷ್ಣುತೆಯನ್ನು ಹೊಂದಿದೆ ಎಂದು ನಾನು ಭಾವಿಸುತ್ತೇನೆ. ಇದು ಕಳವಳಕಾರಿಯಾಗಿದೆ ಎಂದು ಜಹಗೀರ್ದಾರ್ ಹೇಳಿದ್ದಾರೆ.
ಅಂತಹ ಮತ್ತೊಂದು ಮಧ್ಯಸ್ಥಿಕೆ ಕುರಿತು ಹೇಳಿರುವ ಅವರು, 'ಒಬ್ಬ ಸೆಷನ್ಸ್ ನ್ಯಾಯಾಧೀಶರು, 'ಮಹಿಳೆಯರು ಸಾಮಾನ್ಯವಾಗಿ ತಮಗಿಂತ ಹೆಚ್ಚು ಸಂಪಾದನೆ ಮಾಡುವ ವ್ಯಕ್ತಿಯನ್ನು ಹುಡುಕುತ್ತಾಳೆ ಮತ್ತು ಅಂತವರನ್ನು ಮದುವೆಯಾಗಲು ಬಯಸುತ್ತಾಳೆ. ಕಡಿಮೆ ಸಂಪಾದಿಸುವ ಗಂಡನನ್ನು ಅವರು ಬಯಸುವುದಿಲ್ಲ. ಆದರೆ, ಪುರುಷರು ಇದಕ್ಕೆ ವಿರುದ್ಧವಾಗಿರುತ್ತಾರೆ. ಚೆನ್ನಾಗಿ ಸಂಪಾದಿಸುವ ಪುರುಷರು ತಾನು ಮದುವೆಯಾಗಲು ಬಯಸಿದರೆ, ತನ್ನ ಮನೆಯಲ್ಲಿ ಕೆಲಸ ಮಾಡಿಕೊಂಡಿರುವಂತವರನ್ನು ಬೇಕಾದರೂ ಮದುವೆಯಾಗುತ್ತಾರೆ. ಪುರುಷರು ಎಷ್ಟು ನಮ್ಯತೆಯನ್ನು ಹೊಂದಿದ್ದಾರೆಂದು ನೋಡಿ. ನೀವು ಸ್ವಲ್ಪ ನಮ್ಯತೆಯನ್ನು ತೋರಿಸಬೇಕು. ಅಷ್ಟು ಕಟ್ಟುನಿಟ್ಟಾಗಿರಬೇಡಿ' ಎಂದಿದ್ದಾರೆ.