ನವದೆಹಲಿ: ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಮುಡಿಗೇರಿಸಿಕೊಂಡ ಭಾರತ ಕ್ರಿಕೆಟ್ ತಂಡವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಅಭಿನಂದಿಸಿದ್ದಾರೆ.
ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಭಾರತ ನಾಲ್ಕು ವಿಕೆಟ್‌ಗಳಿಂದ ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಟ್ರೋಫಿ ಮುಡಿಗೇರಿಸಿಕೊಂಡಿತು.
ಭಾರತ ಟ್ರೋಫಿಗೆ ಮುತ್ತಿಕ್ಕುತ್ತಿದ್ದಂತೆಯೇ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು, ಮೂರು ಬಾರಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಏಕೈಕ ತಂಡ ಭಾರತವಾಗಿದೆ. ಇತಿಹಾಸವನ್ನು ಸೃಷ್ಟಿಸಿದ ಆಟಗಾರರು, ನಿರ್ವಹಣೆ ಮತ್ತು ಸಹಾಯಕ ಸಿಬ್ಬಂದಿ ಅತ್ಯುನ್ನತ ಪುರಸ್ಕಾರಕ್ಕೆ ಅರ್ಹರು. ನಾನು ಭಾರತೀಯ ಕ್ರಿಕೆಟ್‌ಗೆ ಉಜ್ವಲ ಭವಿಷ್ಯವನ್ನು ಬಯಸುತ್ತೇನೆ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, “ಅಸಾಧಾರಣ ಆಟ ಮತ್ತು ಅಸಾಧಾರಣ ಫಲಿತಾಂಶ! ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ದೇಶಕ್ಕೆ ತಂದಿದ್ದಕ್ಕಾಗಿ ನಮ್ಮ ಕ್ರಿಕೆಟ್ ತಂಡದ ಬಗ್ಗೆ ಹೆಮ್ಮೆಯಿದೆ. ಅವರು ಟೂರ್ನಿಯಲ್ಲಿ ಅದ್ಭುತವಾಗಿ ಆಡಿದ್ದಾರೆ. ಅತ್ಯುತ್ತಮ ಪ್ರದರ್ಶನಕ್ಕಾಗಿ ನಮ್ಮ ತಂಡಕ್ಕೆ ಅಭಿನಂದನೆಗಳು ಎಂದು ಪ್ರಧಾನಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನಾಡಿನ ಮನೆಮಗ ಕೆ.ಎಲ್. ರಾಹುಲ್ ಆಟ ಹೆಚ್ಚು ಖುಷಿಕೊಟ್ಟಿದೆ ಎಂದು ಟ್ವೀಟ್ ಮಾಡಿದ್ದಾರೆ.