ಅಮೃತಸರ: ಅಮೃತಸರದ ಸ್ವರ್ಣ ಮಂದಿರ ಆವರಣದಲ್ಲಿ ಶುಕ್ರವಾರ ದುಷ್ಕರ್ಮಿಯೊಬ್ಬ ಕಬ್ಬಿಣದ ರಾಡ್‌ನಿಂದ ಸಿಕ್ಕಸಿಕ್ಕವರ ಮೇಲೆ ದಾಳಿ ಮಾಡಿದ್ದು, ಘಟನೆಯಲ್ಲಿ ಕನಿಷ್ಠ ಐವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಗಾಯಗೊಂಡವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಐಸಿಯುಗೆ ದಾಖಲಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಶ್ರೀ ಗುರು ರಾಮದಾಸ್ ಸರೈನಲ್ಲಿ ದುಷ್ಕರ್ಮಿಯೊಬ್ಬ ಕಬ್ಬಿಣದ ರಾಡ್‌ನಿಂದ ಜನರ ಮೇಲೆ ದಾಳಿ ಮಾಡಿದ್ದಾರೆ. ಮಂದಿರದ ಒಳಗೇ ದಾಳಿ ನಡೆದಿರುವುದು ಸಿಖ್ ಸಮುದಾಯದವರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.
ಹಲ್ಲೆಕೋರನನ್ನು ಜುಲ್ಫಾನ್ ಎಂದು ಗುರುತಿಸಲಾಗಿದ್ದು, ಆತನನ್ನು ಹಿಡಿದು ಪೊಲೀಸರಿಗೆ ಹಸ್ತಾಂತರಿಸಲಾಗಿದೆ.
ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿ(ಎಸ್‌ಜಿಪಿಸಿ) ಜುಲ್ಫಾನ್ ಎಂಬ ವ್ಯಕ್ತಿಯನ್ನು ಪೊಲೀಸರಿಗೆ ಒಪ್ಪಿಸಿದೆ. ಸ್ವರ್ಣ ಮಂದಿರ ಆವರಣದಲ್ಲಿ ಘರ್ಷಣೆ ನಡೆದಿದ್ದು, ಎರಡೂ ಕಡೆಯ ಜನರು ಗಾಯಗೊಂಡಿದ್ದಾರೆ. ಎಸ್‌ಜಿಪಿಸಿ ಕಾರ್ಯಕರ್ತರು ಸಹ ಗಾಯಗೊಂಡಿದ್ದಾರೆ. ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಕೊಟ್ವಾಲಿ ಎಸ್‌ಎಚ್‌ಒ ಸರ್ಮೆಲ್ ಸಿಂಗ್ ಅವರು ತಿಳಿಸಿದ್ದಾರೆ.
ಗಾಯಗೊಂಡವರನ್ನು ಅಮೃತಸರದ ಗುರು ರಾಮದಾಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.